ವೈಟ್ ಬೋರ್ಡ್ ಟ್ಯಾಕ್ಸಿ ವಿರುದ್ಧ ಪ್ರತಿಭಟನೆ

mysore
Published on

ಮೈಸೂರು: ನಗರದಲ್ಲಿ ಟ್ಯಾಕ್ಸಿಯಾಗಿ ಬಳಕೆ ಮಾಡುತ್ತಿರುವ ವೈಟ್ ಬೋರ್ಡ್, ಎಲೆಕ್ಟ್ರಿಕಲ್ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ವತಿಯಿಂದ ನಗರದ ಆರ್‌ಟಿಒ(ಪಶ್ಚಿಮ) ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ವೈಟ್ ಬೋರ್ಡ್, ಎಲೆಕ್ಟ್ರಿಕಲ್ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸಲಾಗುತ್ತಿದೆ. ಇದರಿಂದ ಆಟೋರಿಕ್ಷಾ ಚಾಲಕರಿಗೆ ದುಡಿಮೆ ಸಿಗದಂತಾಗಿದೆ. ಇದರಿಂದ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಅನ್ಯಾಯವಾಗುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಕ್ರಮ ಕೈಗೊಳ್ಳುವಂತೆ ಈಗಾಗಲೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ನ.30ರವರೆಗೆ ಗಡುವು ನೀಡಲಾಗಿದೆ. ಈ ಗಡುವಿನಲ್ಲಿ ಕ್ರಮಕೈಗೊಳ್ಳದಿದ್ದಲ್ಲಿ ಡಿ.3 ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಗೆ ಆಟೋಗಳಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು

ಸಂಘಟನೆಯ ಅಧ್ಯಕ್ಷ ಬಸವರಾಜ್ ಪಡುಕೋಟೆ, ಗೌರವಾಧ್ಯಕ್ಷ ಗಣೇಶ್ ರಾವ್, ಜಿಲ್ಲಾಧ್ಯಕ್ಷ ಜಿ.ಮುರುಗನ್, ಚಾಮರಾಜನಗರ ಜಿಲ್ಲಾಧ್ಯಕ್ಷ ಸುರೇಶ್ ನಾಯಕ, ವಿಜಯಪುರ ಜಿಲ್ಲಾಧ್ಯಕ್ಷ ಮಹೇಶ್ ನಾಯಕ, ಪದಾಧಿಕಾರಿಗಳಾದ ಎಚ್.ಶಿವಕುಮಾರ್, ಪಿ. ವಿನಾಯಕ, ಸುರೇಶ್ ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net