

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ರಾಷ್ಟ್ರೀಯ ಅಂಕಿ ಸಂಖ್ಯೆಗಳ ಕಾರ್ಯಾಲಯವು (ಎನ್ಎಸ್ಎಸ್ಒ) ವಿವಿಧ ವಲಯ, ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ವಿಧಾನಗಳನ್ನು ಅನುಸರಿಸುತ್ತದೆ. ಸಮೀಕ್ಷೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿ ವೃತ್ತಿಪರ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಎನ್ಎಸ್ಎಸ್ಒ ಹುಬ್ಬಳ್ಳಿ ಪ್ರಾಂತೀಯ ಕಚೇರಿ ನಿರ್ದೇಶಕಿ ಸುಗಂಧಾ ಶ್ರೀವಾಸ್ತವ ಹೇಳಿದರು.
ಎನ್ಎಸ್ಎಸ್ಒ ಹುಬ್ಬಳ್ಳಿ ಪ್ರಾಂತೀಯ ಕಚೇರಿಯಲ್ಲಿ ಗುತ್ತಿಗೆ ಆಧಾರದ ಸಿಬ್ಬಂದಿಗೆ 4 ವಾರ ಕಾಲ ಆಯೋಜಿಸಿರುವ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮೀಕ್ಷೆ ಕೈಗೊಳ್ಳುವುದು ಸವಾಲಿನ ಕೆಲಸವಾಗಿದೆ. ಸಂಗ್ರಹಿಸಲಾಗುವ ಅಂಕಿ ಅಂಶಗಳು ವಿಶ್ವಾಸಾರ್ಹವಾಗಿರಬೇಕು ಎಂದರು.
ಆರೋಗ್ಯ, ಉದ್ಯೋಗಾವಕಾಶ, ಬಡತನ, ಇನ್ನಿತರ ವಲಯ, ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಸಂಗ್ರಹಿಸಲು ಎನ್ಎಸ್ಎಸ್ಒ ದೀರ್ಘವಾದ ಸಮೀಕ್ಷೆಗಳನ್ನು ನಡೆಸುತ್ತದೆ. ಹೀಗೆ ಸಂಗ್ರಹಿಸಲಾಗುವ ಅಂಕಿ-ಅಂಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆ ಹಾಗೂ ನೀತಿ ನಿರೂಪಣೆಯಲ್ಲಿ ಉಪಯೋಗಿಸುತ್ತವೆ. ಈ ಮಾಹಿತಿಗಳು ದೇಶದ ಅಭಿವೃದ್ಧಿಗೂ ಪೂರಕವಾಗಿವೆ ಎಂದು ಹೇಳಿದರು.
ಸಮೀಕ್ಷೆ ಎಂದಾಗ ಜನ ಸಾಮಾನ್ಯರಲ್ಲಿ ಜನಗಣತಿ ಹಾಗೂ ಭೂ ದಾಖಲೆಗಳಿಗೆ ಸಂಬಂಧಿಸಿದ್ದು ಎಂಬ ಭಾವನೆ ಇರುವುದು ಸಹಜ. ಹಾಗಾಗಿ ತಾವು ಎಚ್ಚರಿಕೆಯಿಂದ ಸಮೀಕ್ಷೆ ನಡೆಸಬೇಕು. ಎನ್ಎಸ್ಎಸ್ಒ ಹುಬ್ಬಳ್ಳಿ ಪ್ರಾಂತೀಯ ಕಚೇರಿ ಹಾಗೂ ಬೆಳಗಾವಿ, ಬಳ್ಳಾರಿ ಮತ್ತು ಕಲಬುರಗಿ ಉಪ ಪ್ರಾಂತೀಯ ಕಚೇರಿಗಳ ಗುತ್ತಿಗೆ ಆಧಾರದ ಸಿಬ್ಬಂದಿಗೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಆರ್.ಎ. ಹಿರೇಮಠ ಇದ್ದರು. ಹಿರಿಯ ಅಂಕಿ ಸಂಖ್ಯೆ ಅಧಿಕಾರಿ ಪ್ರಮೋದ ಪಂಡಿತ ನಿರ್ವಹಿಸಿದರು. ಉಪ ನಿರ್ದೇಶಕ ಅಚ್ಚು ಶ್ರೀಕುಮಾರ ವಂದಿಸಿದರು.