ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ

25CBP6DCvisit
Published on

ಚಿಕ್ಕಬಳ್ಳಾಪುರ : ನಿರಂತರವಾಗಿ ಜಿಲ್ಲಾ ಕೇಂದ್ರದ ಪ್ರದಕ್ಷಿಣೆ ಕೈಗೊಳ್ಳುತ್ತಿರುವ ಜಿಲ್ಲಾಧಿಕಾರಿ ಆರ್.ಲತಾ ಮಂಗಳವಾರ ನಗರದ 11 ನೇ ವಾರ್ಡ್‌ನಲ್ಲಿ ಪರಿಶೀಲಿಸಿದರು.

ನಗರದ ಎಲ್ಲ ವಾರ್ಡ್‌ಗಳಲ್ಲಿಯೂ ಕರೊನಾ ಸೋಂಕು ತಡೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಸ್ವಚ್ಛತೆ ಕಾಪಾಡಲು ಮತ್ತು ಉಸ್ತುವಾರಿಗಾಗಿ ಕ್ಯಾಪ್ಟನ್‌ಗಳನ್ನು ನೇಮಿಸಲಾಗಿದೆ. ಇವರು ನಗರದಲ್ಲಿ ತ್ಯಾಜ್ಯ ಸಂಗ್ರಹವಾಗುವ ಸ್ಥಳಗಳನ್ನು ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿಸಲಿದ್ದಾರೆ ಎಂದರು.

ಸಾರ್ವಜನಿಕರು ಮನೆಗಳಿಂದಲೇ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ, ನಗರಸಭೆಗೆ ವಿತರಿಸಬೇಕು. ಎಲ್ಲೆಂದರಲ್ಲಿ ಬಿಸಾಡಬಾರದು. ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಚರಂಡಿ ಮತ್ತು ರಸ್ತೆಗಳು ಸದಾ ಸ್ವಚ್ಛವಾಗಿರಬೇಕು. ಸುತ್ತಲು ಒಳ್ಳೆಯ ನೈರ್ಮಲ್ಯದ ವಾತಾವರಣ ಇರಬೇಕು. ಆಗ ಮಾತ್ರ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ ಎಂದರು.

ಜನರೊಂದಿಗೆ ಚರ್ಚೆ :  ಪರಸ್ಪರ ಅಂತರ ಕಾಪಾಡಿಕೊಳ್ಳದೆ ಕರೊನಾ ನಿಯಮಗಳನ್ನು ಉಲ್ಲಂಘಿಸಿದ್ದ ಹೋಟೆಲ್ ಅನ್ನು ಮುಚ್ಚಿಸಲು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿ ತಪ್ಪುಗಳು ಕಂಡು ಬಂದಲ್ಲಿ ಕಾನೂನು ಪ್ರಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಾರ್ಡ್‌ನಲ್ಲಿ ರಸ್ತೆ, ಚರಂಡಿಗಳ ಶುಚಿತ್ವ, ಮನೆ-ಮನೆ ಕಸ ಸಂಗ್ರಹ, ಕರೊನಾ ಅರಿವು ಮೂಡಿಸುವ ಬ್ಯಾನರ್‌ಗಳ ಅಳವಡಿಕೆಯ ಬಗ್ಗೆ ಪರಿಶೀಲಿಸಿದರು. ಪೌರಾಯುಕ್ತ ಲೋಹಿತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net