ವೈಜ್ಞಾನಿಕವಾಗಿ ಘನ, ದ್ರವ ತ್ಯಾಜ್ಯ ನಿರ್ವಹಣೆಗೆ ಡಿಸಿ ಸೂಚನೆ

ವೈಜ್ಞಾನಿಕವಾಗಿ ಘನ, ದ್ರವ ತ್ಯಾಜ್ಯ ನಿರ್ವಹಣೆಗೆ ಡಿಸಿ ಸೂಚನೆ
Published on

ಹಾಸನ: ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪರಿಸರ ಯೋಜನೆ ಕುರಿತು ಸಭೆ ನಡೆಸಿದ ಅವರು, ಎಲ್ಲಾ ವಾರ್ಡ್‌ಗಳಲ್ಲಿ ಕಡ್ಡಾಯವಾಗಿ ವರ್ಗಿಕರಿಸಿ ಕಸ ಸಂಗ್ರಹ ಮಾಡಬೇಕು ಮತ್ತು ಪೌರ ಕಾರ್ಮಿಕರಿಗೆ ಸುರಕ್ಷತಾ ಸಾಮಗ್ರಿಗಳನ್ನು ಕಡ್ಡಾಯವಾಗಿ ವಿತರಿಸಬೇಕು. ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ನೀಡಿರುವ ವರದಿಯನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಜವಾಬ್ದಾರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಾಗಿದ್ದು, ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ಸೂಚಿಸಿದರು.

ಇದೇ ವೇಳೆ ಹಸಿರು ಭೂಮಿ ಪ್ರತಿಷ್ಠಾನದ ರಾಜಿವೇಗೌಡ ಅವರು ನಗರದಲ್ಲಿ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಸಂಸ್ಥೆಯ ಪರವಾಗಿ ಮನವಿ ಸಲ್ಲಿಸಿದರು. ನಗರದಲ್ಲಿ ಮರ- ಗಿಡಗಳನ್ನು ಕಡಿಯದೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು ಎಂದು ಕೋರಿದರು.

ಅಪರ ಜಿಲ್ಲಾಧಿಕಾರಿ ಆನಂದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ.ಜಗದೀಶ್, ಪರಿಸರ ಅಧಿಕಾರಿ ಕೀರ್ತಿ ಕುಮಾರ್, ಹಸಿರು ಭೂಮಿ ಪ್ರತಿಷ್ಠಾನದ ಟಿ.ಪಿ. ಮಂಜುನಾಥ್, ಶಿವಶಂಕರಪ್ಪ, ಜಿಲ್ಲಾ ಆಯುಷ್ ಅಧಿಕಾರಿ ವೀಣಾಲತಾ, ಅಂತರ್ಜಲ ವಿಭಾಗದ ಭೂ ವಿಜ್ಞಾನಿ ಸುಧಾ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹಾಸನ ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net