ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಮುಂದಾದ ಪುರಸಭೆ

Oplus_16908288
Oplus_16908288
Published on

ವಿರಾಜಪೇಟೆ: ಒಂದನೇ ಪೆರುಂಬಾಡಿ ಎಂದಾಕ್ಷಣ ಹಲವರಿಗೆ ಮೊದಲು ನೆನಪಿಗೆ ಬರುವುದೇ ನಗರದ ಕಸ ಹಾಗೂ ತ್ಯಾಜ್ಯಗಳನ್ನು ಸಂಗ್ರಹಿಸುವ ಸ್ಥಳ. ಪುರಸಭೆಯ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳ ಕಸವನ್ನು ಪೆರುಂಬಾಡಿ ಸಂಗ್ರಹಣಾ ಘಟಕದಲ್ಲಿ ತಂದು ಸುರಿಯಲಾಗುತ್ತಿದ್ದು ಇಲ್ಲಿ ಸುರಿದಂತಹ ಕಸ ಕೊಳೆತು ಗಬ್ಬು ನಾರುತ್ತ ಸ್ಥಳೀಯ ಜನರು ಕೆಟ್ಟವಾಸನೆಯನ್ನು ದಿನ ನಿತ್ಯ ಅನುಭವಿಸುವಂತಾಗಿತ್ತು. ಜತೆಗೆ ಸುತ್ತಮುತ್ತಲು ವಾಸ ಮಾಡುವ ಜನರ ಮನೆಗಳಲ್ಲಿ ನೊಣಗಳ ಕಾಟ ವಿಪರೀತವಾಗಿತ್ತಲ್ಲದೆ ಆಹಾರ ಪದಾರ್ಥಗಳ ಮೇಲೆ ಕುಳಿತು ಸಾಂಕ್ರಾಮಿಕ ರೋಗ ಹರುಡವ ಭೀತಿ ಎದುರಿಸುತ್ತಿದ್ದರು. ಹೀಗಾಗಿ ಅನೇಕ ಬಾರಿ ಪುರಸಭೆಗೆ ಈ ಬಗ್ಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ.

ಈ ವಿಷಯ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ಬರುತ್ತಿದ್ದಂತೆ ಸ್ಪಂದಿಸಿದ ಅವರು, ಸಮಸ್ಯೆ ಮುಕ್ತಿ ಹಾಡಲು ನಿರ್ಧರಿಸಿ, ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಂಗ್ರಹಣಾ ಘಟಕದಲ್ಲಿ ಯಂತ್ರೋಪಕರಣ ಅಳವಡಿಕೆಗೆ ಸರ್ಕಾರದಿಂದ 79 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಕಸ ವಿಲೇವಾರಿ ಘಟಕಕ್ಕೆ ಆಧುನಿಕ ಯಂತ್ರಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಇದರಿಂದ ಹಲವಾರು ವರ್ಷಗಳಿಂದ ಕಾಡುತ್ತಿದ್ದ ತ್ಯಾಜ್ಯ ಸಮಸ್ಯೆಗೆ ಶಾಸಕರ ಈ ಕ್ರಮದಿಂದ ಮುಕ್ತಿ ದೊರೆಯುತ್ತದೆ ಎಂಬ ಆಶಾಭಾವನೆ ಸ್ಥಳೀಯರಲ್ಲಿ ಹುಟ್ಟಿದೆ. 15 ದಿನಗಳಲ್ಲಿ ಯಂತ್ರ ಅಳವಡಿಸುವ ಕಾರ್ಯ ಮುಕ್ತಾಯಗೊಳ್ಳಲಿದ್ದು, ಶೀಘ್ರವೇ ಕಸ ವಿಲೇವಾರಿ ಘಟಕದಲ್ಲಿ ಕಸಗಳ ರಾಶಿ ಕಮ್ಮಿಯಾಗಿ ಸುಂದರ ಪರಿಸರ ಸೃಷ್ಟಿಯಾಗಲಿದೆ ಎಂದು ಪುರಸಭೆಯಿಂದ ಅಧಿಕಾರಿಗಳು ಜನ ಪ್ರತಿನಿಧಿಗಳು ತಿಳಿಸಿದ್ದಾರೆ.

ಯಂತ್ರದ ಕಾರ್ಯ ವೈಖರಿ:

ಪೆರುಂಬಾಡಿ ಕಸ ಸಂಗ್ರಹಣ ಘಟಕದಲ್ಲಿ ಅಳವಡಿಸಲಾಗುತ್ತಿರುವ ಯಂತ್ರವು ಆಧುನಿಕ ವಿಧಾನದಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸುತ್ತದೆ. ಈ ಯಂತ್ರ ವೈಜ್ಞಾನಿಕ ತಂತ್ರಜ್ಞಾನದಿಂದ ನಿರ್ಮಾಣವಾದ ಕಾರಣ ಮೂರು ಹಂತದಲ್ಲಿ ಕಸವನ್ನು ಬೇರ್ಪಡಿಸುತ್ತದೆ. ಮೊದಲ ಹಂತದಲ್ಲಿ ಚೇಂಬರ್‌ಒಳಗೆ ಕಸವನ್ನು ಹಾಕಿದಂತಹ ಸಂದರ್ಭದಲ್ಲಿ ಗಾತ್ರಾನುಸಾರ ಕಸವು ಎರಡನೇ ಚೇಂಬರ್‌ಗೆ ಸಾಗುತ್ತದೆ. ಅಲ್ಲಿ ಗಾತ್ರಾನುಸಾರವಾಗಿ ಒಣಕಸವು ಬೇರ್ಪಟ್ಟು ಹಸಿ ಕಸ ಮೂರನೇ ಹಂತಕ್ಕೆ ಸಾಗುತ್ತದೆ. ಮೂರನೆಯ ಹಂತದಲ್ಲಿ ಕೊಳೆಯಬಹುದಾದ ಹಸಿ ಕಸ ಮಾತ್ರ ಉಳಿದು ಹೊರಬರುತ್ತದೆ. ಈ ರೀತಿಯಾಗಿ ಹೊರಬಂದ ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಬದಲಾಯಿಸುವ ಕಾರ್ಯವು ಸದ್ಯದಲ್ಲಿಯೇ ಆರಂಭವಾಗಲಿದೆ. ಉಳಿದಂತಹ ಪ್ಲಾಸ್ಟಿಕ್ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಮರು ಬಳಕೆಗೆ ಕೊಂಡೊಯ್ಯುತ್ತದೆ. ಈ ರೀತಿಯಾಗಿ ಇನ್ನು ಕೆಲವೇ ದಿನಗಳಲ್ಲಿ 35 ವರ್ಷಗಳಿಂದ ಶೇಖರಣೆಯಾಗಿದ್ದ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಸುತ್ತಮುತ್ತಲಿನ ಕಸಕ್ಕೆ ಮುಕ್ತಿ ಸಿಗಲಿದೆ.

ಯಂತ್ರದ ಚಾಲನೆಗೆ ವಿದ್ಯುತ್ ಅವಶ್ಯಕತೆ ಇರುವುದರಿಂದ ಪ್ರತ್ಯೇಕವಾದ ಟ್ರಾನ್ಸ್ ಫಾರ್ಮರ್ ಅಳವಡಿಸಬೇಕಾಗಿದ್ದು, ಶಾಸಕರು ಟ್ರಾನ್ಸ್ ಫಾರ್ಮರ್ ನಿರ್ಮಾಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ಕೂಡ ನೀಡಿದ್ದಾರೆ.

ಕಸ ಸಂಗ್ರಹಣ ಘಟಕಕ್ಕೆ ಶಾಸಕರು ಆರು ತಿಂಗಳ ಹಿಂದೆ ಭೇಟಿ ನೀಡಿದಾಗ ಸ್ಥಳದಲ್ಲಿರುವ ಸಮಸ್ಯೆಯನ್ನು ಅರಿತು ಸ್ವಚ್ಛತೆಗೆ ಆದ್ಯತೆ ನೀಡಬೇಕೆನ್ನುವ ಕಾರಣ ವೈಜ್ಞಾನಿಕವಾಗಿ ಕಸವನ್ನು ಬೇರ್ಪಡಿಸುವ ಕಾಮಗಾರಿಯನ್ನು ಆರಂಭಿಸಲು ಜಿಲ್ಲಾಧಿಕಾರಿಗೆ ತಿಳಿಸಿ ಟೆಂಡರ್ ನಡೆಸಿದರು. ಅದರಂತೆ ಪುಣೆ ಮೂಲದ ಕಂಪನಿಯೊಂದು ಕಂಟ್ರಾೃಕ್ಟ್ ತೆಗೆದುಕೊಂಡಿದ್ದು, ಆರು ತಿಂಗಳಲ್ಲಿ ಎಲ್ಲ ರೀತಿಯ ಟೆಕ್ನಿಕಲ್ ಕೆಲಸಗಳನ್ನು ಮುಗಿಸಿ ಡಿಸೆಂಬರ್ ಅಂತ್ಯದ ವೇಳೆಗೆ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಮುಂದಾಗಲಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net