

ದಾವಣಗೆರೆ: ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಜತೆಗೆ ವೈಜ್ಞಾನಿಕ ಮನೋಧರ್ಮಕ್ಕೆ ಪ್ರೋತ್ಸಾಹ ನೀಡಲಿದೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ನಾಗೇಶ್ ತಿಳಿಸಿದರು.
ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಮೂರನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಎನ್‌ಇಪಿ, 21 ನೇ ಶತಮಾನದ ಅಗತ್ಯಗಳಿಗೆ ಸೂಕ್ತವಾದ ವಿಶಾಲ ಹಾಗೂ ಬಹುಶಿಸ್ತೀಯ ಶಿಕ್ಷಣದ ಮೂಲಕ ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಆಗಿ ಪರಿವರ್ತಿಸುವ ಉದ್ದೇಶದಿಂದ ಜಾರಿಗೆ ಬಂದಿದೆ. ಪ್ರತಿ ವಿದ್ಯಾರ್ಥಿಯಲ್ಲೂ ವಿಶಿಷ್ಟ ಸಾಮರ್ಥ್ಯ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಲಿದೆ. ಅಧ್ಯಯನದ ಬದಲಿಗೆ ಕಲಿಕೆಯತ್ತ ಕೇಂದ್ರೀಕರಿಸಲು ಸಹಕಾರಿಯಾಗಿದೆ ಎಂದರು.
ಈ ನೀತಿಯಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ, ಎನ್‌ಸಿಸಿ ಮತ್ತು ಸ್ಕೌಟ್-ಗೈಡ್ಸ್ ಘಟಕಗಳನ್ನು ಹೊಂದುವ ಅವಕಾಶಗಳಿವೆ. ಯೋಗ, ಕ್ರೀಡೆ, ವಿಜ್ಞಾನ ಪ್ರದರ್ಶನಗಳು, ಸಮಾಜ ವಿಜ್ಞಾನ ಪ್ರದರ್ಶನಗಳಿಗೆ ಹೆಚ್ಚು ಬಲ ನೀಡಲಿದೆ ಎಂದು ಹೇಳಿದರು.
ಎನ್‌ಇಪಿ 2020 ಅಡಿಯ ಶಿಕ್ಷಣವು ಪರಿಕಲ್ಪನಾ ತಿಳಿವಳಿಕೆ, ಬಹುಶಿಸ್ತೀಯ ವಿಧಾನ, ತಂತ್ರಜ್ಞಾನ ಏಕೀಕರಣ ಮತ್ತು ಶಿಕ್ಷಕರ ತರಬೇತಿಗೆ ಒತ್ತು ನೀಡಲಿದೆ. ಈ ಮೂಲಕ ಹೆಚ್ಚು ಕಲಿಯುವವರ ಕೇಂದ್ರಿತ ಮತ್ತು ಅನುಭವದ ಕಲಿಕೆ ಆಧಾರಿತ ವಿಧಾನದ ಕಡೆಗೆ ಒತ್ತು ನೀಡಲಿದೆ. ಸಾಂಪ್ರದಾಯಿಕ, ಮೌಖಿಕ ಕಲಿಕೆ ಮತ್ತು ಕಂಠಪಾಠ ಆಧಾರಿತ ವಿಧಾನಗಳಿಂದ ದೂರ ಮಾಡುತ್ತದೆ ಎಂದು ವಿವರಿಸಿದರು.
ದಾವಣಗೆರೆ ವಿವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಎಂ. ಈಶ್ವರಪ್ಪ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಸ್ವಾವಲಂಭಿಗಳಾಗಲು ವಿದ್ಯಾಭ್ಯಾಸದ ಜತೆಗೆ ಕೌಶಲ ತರಬೇತಿಗಳನ್ನು ನೀಡುತ್ತಿದೆ. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಶಿಕ್ಷಣ ಸಚಿವಾಲಯ ಮತ್ತು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಯುವಕರ ಕೌಶಲ ವೃದ್ಧಿಗಾಗಿ ಕೇಂದ್ರಗಳನ್ನು ಪ್ರಾರಂಭಿಸಿದೆ ಎಂದರು.
ಕೇಂದ್ರೀಯ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಅನುಕೂಲಕರ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದೆ. ಹೊಸ ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳ ನಿರ್ಮಾಣ, ಹಾಗೆಯೇ ಇ-ಪುಸ್ತಕಗಳು ಮತ್ತು ಆನ್‌ಲೈನ್ ಕಲಿಕಾ ವೇದಿಕೆಗಳಂತಹ ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಎಸ್. ವೀರಭದ್ರ ನಾಯ್ಕ, ನವೋದಯ ವಿದ್ಯಾಲಯದ ಎ.ವಿಜಯಾ, ಪಿ.ಆರ್.ಟಿ ತರಬೇತಿ ಸಿಬ್ಬಂದಿ ನೀತು ಪಾಂಡೆ ಇದ್ದರು.
---