

ಮೈಸೂರು: ವಿಜ್ಞಾನ ಅಥವಾ ವೈಜ್ಞಾನಿಕ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಕ್ಷೇತ್ರವು ಈ ವರೆಗೂ ಸಾಹಿತ್ಯ ಎಂದು ಪರಿಗಣಿಸುತ್ತಿಲ್ಲ ಎಂದು ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಿಮಾಲಯ ಪ್ರತಿಷ್ಠಾನದ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಕೀಲ ಕೆ.ವಿ.ವಾಸು ಅವರ ‘ಕಾತ್ಯಾಯಿನಿ ಮತ್ತು ಇತರ ಕಥೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯದಲ್ಲಿ ಹಲವು ಪ್ರಕಾರಗಳಿದ್ದು, ಅವುಗಳಲ್ಲಿ ವೈಜ್ಞಾನಿಕ ಸಾಹಿತ್ಯವೂ ಒಂದಾಗಿದೆ. ಈ ವಿಜ್ಞಾನ ಅಥವಾ ವೈಜ್ಞಾನಿಕ ಸಾಹಿತ್ಯವನ್ನು ಈ ವರೆಗೂ ಸಾಹಿತ್ಯ ಎಂದು ಪರಿಗಣಿಸುತ್ತಿಲ್ಲ. ಈ ಕುರಿತು ಸಾಹಿತ್ಯ ಕ್ಷೇತ್ರವನ್ನು ಭದ್ರವಾಗಿ ಹಿಡಿದುಕೊಂಡಿರುವವರು ಇನ್ನೂ ಅರೆ ಮನಸ್ಸಿನಲ್ಲಿದ್ದಾರೆ. ಬದುಕಲು ಬೇಕಾದ ಜ್ಞಾನ ಕೊಡುವುದೆಲ್ಲವೂ ಸಾಹಿತ್ಯ. ವಿಜ್ಞಾನ ಸಾಕ್ಷಾಧಾರಿತ, ಸತ್ಯವನ್ನು ಪ್ರತಿಪಾದಿಸುವುದು ವೈಜ್ಞಾನಿಕ ಸಾಹಿತ್ಯ. ಅದು ಕೂಡ ಸಾಹಿತ್ಯದ ಪ್ರಕಾರ ಎಂದು ಮನವರಿಕೆಯಾಗುತ್ತಿದೆ. ವಿಜ್ಞಾನ ಕುರಿತು ಬರೆಯುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆದ್ದರಿಂದ ಇದೀಗ ವೈಜ್ಞಾನಿಕ ಸಾಹಿತ್ಯ ನಿಧಾನವಾಗಿ ಜನರಿಗೂ ಮನವರಿಕೆಯಾಗುತ್ತಿದೆ ಎಂದರು.
ಸಾಹಿತ್ಯ ಎನ್ನುವುದು ಸ್ವಹಿತ ಇದ್ದಂತೆ. ಯಾವುದು ಮನುಷ್ಯನ ಮನಸ್ಸು, ಬದುಕನ್ನು ಹಿತ ಮಾಡುತ್ತದೋ ಅದುವೇ ಸಾಹಿತ್ಯ. ಯಾರು ಸಾಹಿತ್ಯ ಓದುತ್ತಾರೋ ಅವರೆಲ್ಲ ಸಂಸ್ಕಾರವಂತರಾಗಿ ರೂಪುಗೊಳ್ಳುತ್ತಾರೆ. ಇಂತಹವರ ಸಂಖ್ಯೆ ಹೆಚ್ಚಾದರೆ ಸುಸಂಸ್ಕೃತ, ಶಾಂತಿಯುತ, ನೆಮ್ಮದಿ ಸಮಾಜ ನಿರ್ಮಾಣವಾಗಲಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಡಾ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕಿ ಡಾ.ಕೆ.ಲೀಲಾಪ್ರಸಾದ್, ಸಂಶೋಧಕ ಎನ್.ಅಶ್ವತ್ಥನಾರಾಯಣ್, ಮುಕ್ತಕ ಸಾಹಿತಿ ಎಂ.ಮುತ್ತುಸ್ವಾಮಿ ಇನ್ನಿತರರು ಇದ್ದರು.