

ಮೈಸೂರು: ಇಂದಿನ ದಿನಮಾನಗಳಲ್ಲಿ ವೈಭವೀಕರಣವೇ ಹೆಚ್ಚಾಗಿದ್ದು, ವೈಜ್ಞಾನಿಕ ಸಂಶೋಧನೆ ಯಾರಿಗೂ ಬೇಡವಾಗಿದೆ ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಸಂವಹನ ಟ್ರಸ್ಟ್‌ನಿಂದ ನಗರದ ರಾಜೇಂದ್ರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತಿಂಗಳಿಗೊಂದು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ಸಾಹಿತ್ಯದ ವಿದ್ಯಮಾನಗಳು ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯದಲ್ಲಿ ಪುರಾಣಗಳ ಮರು ವ್ಯಾಖ್ಯಾನ, ಅಲ್ಲಿನ ವ್ಯಕ್ತಿಗಳನ್ನು ಇಂದಿನ ಪ್ರಶ್ನೆಗಳಿಗೆ ಎದುರು ನಿಲ್ಲಿಸುವುದು, ಆತ್ಮಕತೆಗಳನ್ನು ಹೆಚ್ಚು ಮುಕ್ತವಾಗಿ ಬರೆಯುವುದು ಹೆಚ್ಚುಗಾರಿಕೆ. ಆದರೆ, ಚರಿತ್ರೆ ರಚಿಸುವುದು ಇನ್ನೂ ತಿಳಿದಿಲ್ಲ. ಕೆಂಪೇಗೌಡರ ಮೂರ್ತಿಗೆ ಟಿಪ್ಪು ಸುಲ್ತಾನನ ಕಾಲದ ನಿಲುವಂಗಿ ತೋಡಿಸುವ ಮೂಲಕ ವೈಭವ ತೋರುತ್ತಿದ್ದೇವೆ. ಇಂದು ವೈಭವೀಕರಣವೇ ಹೆಚ್ಚಾಗಿದ್ದು, ವೈಜ್ಞಾನಿಕ ಸಂಶೋಧನೆ ಯಾರಿಗೂ ಬೇಡವಾಗಿದೆ ಎಂದರು.
ರಾಜ್ಯಗಳ ನಡುವಿನ ಚಲನೆ ಸಾಹಿತ್ಯ ಬಯಸಿತು. ಅನುವಾದಗಳು ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳುವಂತೆ ಮಾಡಿದವು. ಇತರ ಭಾರತೀಯ ಭಾಷೆಗಳಿಗಿಂತಲೂ ಕನ್ನಡ ಈ ವಿಚಾರದಲ್ಲಿ ಮುಂದೆ ಸಾಗಿದೆ ಎಂಬುದು ಹೆಮ್ಮೆಯ ಸಂಗತಿ. ಆದರೆ, ಹೆಚ್ಚಾಗಿ ಈಗ ಅನ್ಯ ಭಾಷೆಯ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿದ್ದರೂ ಕನ್ನಡದ ಕೃತಿಗಳು ಬೇರೆ ಭಾಷೆಗೆ ಅನುವಾದಗೊಳ್ಳುತ್ತಿಲ್ಲ. ಕನ್ನಡದ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಗೊಳಿಸುವ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
90ರ ದಶಕದ ನವ ಉದಾರೀಕರಣ ನೀತಿ, ಭೂಷಣ್ ಪಟವರ್ಧನ್ ಸಮಿತಿ ಸಲಹೆಗಳ ಬಳಿಕ ಅಳವಡಿಸಿಕೊಂಡ ನವ ಶಿಕ್ಷಣ ನೀತಿಯಿಂದ ಹಲವು ವಸ್ತುಗಳು ಸಿಕ್ಕಿ ಇತ್ತೀಚಿನ ಸಾಹಿತ್ಯ ಬೆಳೆಯಲು ಕಾರಣವಾಯಿತು. ಸಾಹಿತ್ಯ ನಿಂತ ನೀರಾಗದೆ ಪ್ರಚಲಿತ ವಿಷಯ, ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ವಿದ್ಯಮಾನ ಎಲ್ಲರನ್ನು ಒಳಗೊಳ್ಳುವ ಕಾರ್ಯಕ್ರಮವಾಗಲಿ. ಸಮಾಜವನ್ನು ವೈಚಾರಿಕ ಹಾದಿಯತ್ತ ಕೊಂಡೊಯ್ಯಲು ಸಹಕರಿಸಲಿ ಎಂದು ಶುಭಹಾರೈಸಿದರು.
ಸಾಹಿತಿ ಡಾ.ರಾಮೇಗೌಡ, ಪ್ರಾದೇಶಿಕ ಆಯುಕ್ತ ಕಚೇರಿಯ ಹೆಚ್ಚುವರಿ ಆಯುಕ್ತ ಪಿ.ಶಿವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟಾದಾರ್ಯ, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ, ಕಾರ್ಯದರ್ಶಿ ಜೀನಹಳ್ಳಿ ಸಿದ್ದಲಿಂಗಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಚಂದ್ರಶೇಖರ್, ಖಜಾಂಚಿ ಎಂ.ನಟರಾಜ್, ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಪ್ರೊ.ಮೊರಬದ ಮಲ್ಲಿಕಾರ್ಜುನ ಇತರರು ಇದ್ದರು.