

ಹಾಸನ: ಕಂದಾಚಾರ ಮತ್ತು ಮೂಢನಂಬಿಕೆಯನ್ನು ಬೆಳೆಸಿಕೊಳ್ಳದೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸರಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಸ್.ಎಚ್. ಗಂಗೇಗೌಡ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸಭಾಂಗಣದಲ್ಲಿ ಸರಕಾರಿ ವಿಜ್ಞಾನ ಕಾಲೇಜು, ರೆಡೆ ಕ್ರಾಸ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸಾಮಾನ್ಯರಿಗೆ ಆರೋಗ್ಯದ ಅರಿವು ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ವಸ್ತು ಪ್ರದರ್ಶನದ ಮುಖ್ಯ ಉದ್ದೇಶ ಏನೆಂದರೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸುವುದಾಗಿದೆ. ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಆಗಿದೆ. ಮೂಡನಂಬಿಕೆಯಿಂದ ಹೊರಬಂದು ವಿಜ್ಞಾನದ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸರಕಾರಿ ಕಲಾ ಕಾಲೇಜು ಪ್ರಾಂಶುಪಾಲ ಟಿ.ಪಿ. ಪುಟ್ಟರಾಜು ಮಾತನಾಡಿ ಜನಸಾಮಾನ್ಯರಿಗೆ ಆರೋಗ್ಯದ ಅರಿವನ್ನು ಮೂಡಿಸುವ ಪ್ರಯತ್ನಗಳ ಪರಿಕಲ್ಪನೆ ಪ್ರದರ್ಶಿಸಲಾಗಿದೆ. ಏನೇ ಭಾಗ್ಯ ಇದ್ದರೂ ಆ ಎಲ್ಲಾ ಭಾಗ್ಯಗಳಿಗೆ ಅಡಿಪಾಯ ಆರೋಗ್ಯ ಭಾಗ್ಯ. ಮೊದಲು ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡರೇ ಏನಾದರೂ ಸಾಧಿಸಬಹುದು. ಹಿಂದಿನ ಕಾಲದ ತಾಯಿ ಮಗುವನ್ನು ಬೆಳೆಸುವ ಹಂತದಲ್ಲೇ ಮಗುವಿಗೆ ಆರೋಗ್ಯ ಕಟ್ಟಿಕೊಡುತ್ತಿದ್ದಳಿ. ಆದರೆ ಈಗಿನ ಕಾಲದ ತಾಯಿ ಮಗುವನ್ನು ಒಳಗಡೆಯೇ ಕಟ್ಟಿ ಹಾಕಿ ಆರೋಗ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳು ಮಣ್ಣಿನ ಜತೆ ಬೆರೆಯಬೇಕು. ಮಣ್ಣು ನಿಜವಾದ ಮೂಲ ಚಿಕಿತ್ಸೆ. ಮಗುವನ್ನು ಹಿಂದೆ ಆಟವಾಡಲು ತಾಯಿ ಬಿಡುತ್ತಿದ್ದಳು. ಆಗ ಮಣ್ಣಿನಲ್ಲಿ ಬಿದ್ದು, ಎದ್ದು ಬರುತ್ತಿದ್ದಾಗ ಆರೋಗ್ಯ ವೃದ್ಧಿಸಿ ದೇಹ ಗಟ್ಟಿ ಆಗುತ್ತಿತ್ತು. ಆದರೆ ಈಗ ಮಕ್ಕಳು ಕೆಳಗೆ ಬೀಳದಂತೆ, ಮಣ್ಣಿನ ಜತೆ ಆಟ ಆಡದಂತೆ ಬೆಳೆಸುತ್ತಿದ್ದಾರೆ. ಮಗುವಿಗೆ ಸಣ್ಣ ಸಮಸ್ಯೆಯಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದನ್ನು ಪ್ರಾರಂಭಿಸಿದ್ದೇವೆ. ಇಂದು ಆರೋಗ್ಯ ಶ್ರೀಮಂತರಿಗೆ ಮಾತ್ರವಲ್ಲ. ಬಡವರ ಆರೋಗ್ಯವೂ ಹದಗೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕಾರಿ ಕಲಾ ಕಾಲೇಜು ರೆಡ್ ಕ್ರಾಸ್ ಸಮಿತಿ ಸಂಯೋಜಕರಾದ ಎಚ್.ಡಿ. ದೇವರಾಜು ಮಾತನಾಡಿ, ವ್ಯಕ್ತಿ ತನ್ನ ಜೀವನ ಸಾಗಿಸಲು ನಾನಾ ರೀತಿಯಲ್ಲಿ ಸಂಪಾದನೆ ಮಾಡಲು ಮುಂದಾಗುತ್ತಾನೆ. ಎಷ್ಟೇ ಸಂಪಾದನೆ ಮಾಡಿದರೇನು ಪ್ರಯೋಜನ? ಎಷ್ಟು ಹಣ ಮಾಡಿದರೂ ಏನು ಪ್ರಯೋಜನ. ಆರೋಗ್ಯವೇ ಇಲ್ಲ ಎಂದರೆ ದುಡಿದ ಹಣ ಅನುಭವಿಸಲು ಸಾಧ್ಯವೇ? ಮನುಷ್ಯನ ಜೀವನವೇ ವ್ಯರ್ಥ. ಮೊದಲು ಆರೋಗ್ಯ ಬೇಕು. ಆರೋಗ್ಯದ ಜತೆ ದುಡಿಮೆ ಇರಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸರಕಾರಿ ಕಲಾ ಕಾಲೇಜು ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಬಿ. ಸತ್ಯಮೂರ್ತಿ, ಸರಕಾರಿ ವಿಜ್ಞಾನ ಕಾಲೇಜು ಜೀವರಸಾಯನ ಶಾಸ್ತ್ರ ಮುಖ್ಯಸ್ಥರಾದ ಕೆ.ಆರ್. ಕವಿತಾ, ಸಿ.ಎಸ್. ಭಾರ್ಗವ ಇತರರು ಉಪಸ್ಥಿತರಿದ್ದರು.