

ಕುಶಾಲನಗರ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ವಿಜ್ಞಾನ ಮೇಳಗಳು ಪೂರಕ ಎಂದು ಇಲ್ಲಿನ ಸಂಚಾರ ಪೊಲೀಸ್ ಠಾಣೆಯ ಠಾಣಾಧಿಕಾರಿ ಗೀತಾ ಅಭಿಪ್ರಾಯಪಟ್ಟರು.
ಪಟ್ಟಣದ ಫಾತಿಮಾ ಕಾನ್ವೆಂಟ್‌ನಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಅವರಲ್ಲಿರುವ ಪ್ರತಿಭೆ ಹೊರತರಲು ಇಂತಹ ವಿಜ್ಞಾನ ಮೇಳ ಆಯೋಜಿಸುವುದು ಅತ್ಯವಶ್ಯಕ. ವಿಜ್ಞಾನ ಮೇಳ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಲಿದ್ದು, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿ ಮೂಡಿಸುತ್ತದೆ ಎಂದರು.
ಫಾತೀಮಾ ಕಾನ್ವೆಂಟ್ ವ್ಯವಸ್ಥಾಪಕಿ ಸಿಸ್ಟರ್ ಸ್ಪಂದನಾ ಮಾತನಾಡಿ, ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ವಿಜ್ಞಾನ ಚಿಂತನೆಗಳನ್ನು ಮೂಡಿಸುವ ಅವಶ್ಯಕತೆ ಇದೆ. ಪಠ್ಯದ ಜತೆಗೆ ಪ್ರಾಯೋಗಿಕವಾಗಿ ಜ್ಞಾನ ದೊರೆಯಲು ವಿಜ್ಞಾನ ಮೇಳ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ವೈಜ್ಞಾನಿಕವಾಗಿ ಹೆಚ್ಚಿನ ಜ್ಞಾನ ಮೂಡಲು ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತುಗಳ ಮಾದರಿ ಎಲ್ಲರ ಗಮನ ಸೆಳೆಯಿತು. ನರ್ಸರಿಯಿಂದ ಪದವಿ ಪೂರ್ವದವರೆಗೆ ಹಲವಾರು ವಿದ್ಯಾರ್ಥಿಗಳು ಮೇಳದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿವಿಧ ಮಾದರಿಗಳಾದ ಸೌರವ್ಯೆಹ, ಹನಿ ನೀರಾವರಿ, ಅಣೆಕಟ್ಟು, ಮಾನವನ ದೇಹದ ಭಾಗ ಸೇರಿದಂತೆ ಮತ್ತಿತರ ಮಾದರಿಗಳನ್ನು ಪ್ರದರ್ಶಿಸಿದರು.
ಫಾತೀಮಾ ಕಾನ್ವೆಂಟ್‌ನ ಡಾ.ಸಿಸ್ಟರ್ ಜೆಸ್ವಿನಾ, ಸಿಸ್ಟರ್ ತೆರೇಸ್ ಆ್ಯನ್ ಇತರರು ಹಾಜರಿದ್ದರು.