

ಕಲಘಟಗಿ: ವಿದ್ಯಾರ್ಥಿಗಳು ರ್ತಾಕ ಚಿಂತನೆಯೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಅಟಲ ಟಿಂಕರಿಂಗ್ ಪ್ರಯೋಗಾಲಯ ಸಹಕಾರಿ ಎಂದು ಸಿ.ಎಂ. ನಿಂಬಣ್ಣವರ ಹೇಳಿದರು.
ಇಲ್ಲಿನ ಜನತಾ ಇಂಗ್ಲಿಷ್ ಸ್ಕೂಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಥಮ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಲ್ಪನೆಗಳನ್ನು ಸಾಕಾರಗೊಳಿಸುತ್ತ ಸಮಾಜದ ಒಳಿತಿಗೆ ಅನುಕೂಲವಾಗುವ ಆವಿಷ್ಕಾರಗಳನ್ನು ಪ್ರಚೋದಿಸುವಲ್ಲಿ ನೀತಿ ಆಯೋಗದ ಟಿಂಕರಿಂಗ್ ಲ್ಯಾಬ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಹುಬ್ಬಳ್ಳಿ ಕೆಎಲ್ಇ ಸಂಸ್ಥೆಯ ಬಿ.ವಿ. ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ಗೋಪಾಲ ಜೋಶಿ ಮಾತನಾಡಿ, ಮಕ್ಕಳು ದೊರೆತ ಅವಕಾಶಗಳು, ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿಜ್ಞಾನದ ಆವಿಷ್ಕಾರಗಳು ಮಾನವ ಕುಲದ ಅಭಿವೃದ್ಧಿಗಾಗಿ ಇರಬಾರದು. ನಿಸರ್ಗದ ಬೆಳವಣಿಗೆ, ಉತ್ತಮ ಪರಿಸರ ನಿರ್ವಣ, ಕಂದಾಚಾರ ಮುಕ್ತ ಹಾಗೂ ಭಾರತೀಯ ಸಂಸ್ಕೃತಿಯಲ್ಲಿನ ವೈಜ್ಞಾನಿಕ ವಿಚಾರಗಳನ್ನು ಅನಾವರಣಗೊಳಿಸಲು ಅನುಕೂಲವಾಗುವಂತಿರಬೇಕು ಎಂದರು.
ಕಲಘಟಗಿ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎಚ್.ಬಿ. ಪಾಟೀಲ ಮಾತನಾಡಿ, ಅಟಲ ಟಿಂಕರಿಂಗ್ ಪ್ರಯೋಗಾಲಯ ವಿದ್ಯಾರ್ಥಿಗಳ ಜ್ಞಾನದ ವೃದ್ಧಿಗೆ ಅನುಕೂಲವಾಗಿದೆ. ಹೆಚ್ಚಿನ ಜ್ಞಾನ ಪಡೆದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ, ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಬಿ. ಪಾಟೀಲಕುಲಕರ್ಣಿ, ಸದಸ್ಯರಾದ ಎಸ್.ಎಸ್. ಸಾವುಕಾರ, ಜಿ.ಇ. ಕಾಲೇಜ್ ಪ್ರಾಚಾರ್ಯ ಎಸ್.ಎಸ್.
ಹಾವೇರಿ, ಬಿ.ಎಸ್. ದೇವರಮನಿ, ಎಂ.ಎಸ್. ಕಾಟೆ, ಮಹ್ಮದ್ ಅಜರುದ್ದೀನ್, ಪ್ರಭಾಸ, ವಿವಿಧ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಆವಿಷ್ಕಾರ, ವಿಚಾರ ಹೊರಹಾಕಲು ವೇದಿಕೆ: ಕೇಂದ್ರ ಸರ್ಕಾರದ ನೀತಿ ಆಯೋಗದ ಧನ ಸಹಾಯದೊಂದಿಗೆ ಕಲಘಟಗಿ ತಾಲೂಕಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಸಂಶೋಧನೆ ಪ್ರವೃತ್ತಿ ಬೆಳೆಸಲು ಈ ಪ್ರಯೋಗಾಲಯ ಆರಂಭಿಸಲಾಗಿದೆ. 6ರಿಂದ 12ನೇ ವರ್ಗದ ವಿದ್ಯಾರ್ಥಿ ಗಳಿಗೆ ಹಾಗೂ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಇತರರಿಗೂ ಹೊಸ ಹೊಸ ಆವಿಷ್ಕಾರಗಳನ್ನು, ವೈಜ್ಞಾನಿಕ ವಿಚಾರಗಳನ್ನು ಹೊರಹೊಮ್ಮಿಸಲು ಈ ಪ್ರಯೋಗಾಲಯ ಉಪಯುಕ್ತ ವೇದಿಕೆಯಾಗಲಿದೆ.</