

ದಾವಣಗೆರೆ: ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ್ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ದುರ್ಗಾಶ್ರೀ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆ, ಕಟ್ಟಡ ಕೆಲಸ, ಟೆಕ್ಸ್‌ಟೈಲ್, ಕೈಗಾರಿಕಾ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಬಟ್ಟೆ ಅಂಗಡಿ, ಹೋಟೆಲ್ ಮತ್ತು ಇತರೆ ವಲಯಗಳಲ್ಲಿ ದುಡಿಯುವ ಜನರಿಗೆ ಐಎಲ್‌ಒ ಶಿಫಾರಸಿನಂತೆ ತಿಂಗಳಿಗೆ 31,500 ರೂ. ಕನಿಷ್ಠ ಕೂಲಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಮೃತರಾದಾಗ ನಿಡುತ್ತಿದ್ದ ಅಂತ್ಯಸಂಸ್ಕಾರ ಸಹಾಯಧನ ಯೋಜನೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದು, ಯೋಜನೆಯನ್ನು ಮರುಆರಂಭಿಸಿ ಇದನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ರಾಷ್ಟ್ರೀಯ ಕುಟುಂಬ ಯೋಜನೆ ಪರಿಹಾರದ ಹಣ ಪಡೆಯಲು ಪತಿ ಮೃತಪಟ್ಟಾಗ ಪತ್ನಿಗೆ ನೀಡುತ್ತಿರುವ 20 ಸಾವಿರ ರೂ. ಅನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. -
ಸಣ್ಣ ಮತ್ತು ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಸಬೇಕು. 50 ವರ್ಷ ತುಂಬಿದ ರಂಗಭೂಮಿ ಕಲಾವಿದರುಶ ಹಾಗೂ ಬೀದಿ ನಾಟಕ ಕಲಾವಿದರಿಗೆ ಮಾಸಿಕ 10 ಸಾವಿರ ರೂ. ಮಾಸಾಶನ ನೀಡಬೇಕು. ಗ್ರಾಮ ಠಾಣಾ ಹಾಗೂ ನಗರ ವ್ಯಾಪ್ತಿಯಲ್ಲಿ ಬಡವರು ಹಾಗೂ ಸಾಮಾನ್ಯ ಜನರು ನಿರ್ಮಿಸಿಕೊಂಡಿರುವ ಮನೆಗಳಿಗೆ ರಸ್ತೆ, ನೀರು, ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೂ ಖಾಸಗಿ ಜಮೀನುಗಳಲ್ಲಿ ನಿರ್ಮಿಸಲಾದ ಮನೆಗಳನ್ನು ಒಂದು ಬಾರಿ ಸಕ್ರಮಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಅವರಗೆರೆ ವಾಸು, ಸಿ.ರಮೇಶ್, ಎಸ್.ಜಯಪ್ಪ, ಎಲ್.ರಮೇಶ್ ನಾಯ್ಕ, ರಾಜು ಕೆರನಹಳ್ಳಿ ಐರಣಿ ಚಂದು, ಸರೋಜಾ, ಪಾರ್ವತಮ್ಮ, ಮಂಜಮ್ಮ, ಪುಷ್ಪಾ, ಐರಣಿ ಚಂದ್ರು ಇತರರು ಪ್ರತಿಭಟನೆಯಲ್ಲಿದ್ದರು.