ವೈಜ್ಞಾನಿಕ ಚಿಂತನೆಗಳಿಂದ ದೇಶದ ಪ್ರಗತಿ

CTD VICHARA SANKIRANA----
Published on

ಚಿತ್ರದುರ್ಗ: ಜನರಿಗೆ ವಿಜ್ಞಾನದ ಆವಿಷ್ಕಾರಗಳಿಂದ ದೊರೆತ ಮೊಬೈಲ್, ಟಿವಿ, ಕಾರು ಇತ್ಯಾದಿಗಳು ಬೇಕಾಗಿದೆಯೇ ಹೊರತು, ವೈಜ್ಞಾನಿಕ ಚಿಂತನೆಗಳು ಬೇಡವಾಗಿದೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘ-ಕರ್ನಾಟಕದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ವಿಷಾದಿಸಿದರು.

ನಗರದ ಎಸ್‌ಜೆಎಸ್ ಸಮೂಹ ಸಂಸ್ಥೆ ಭೋವಿ ಗುರುಪೀಠದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಪ್ರಶ್ನಿಸುವ ಪ್ರವೃತ್ತಿ ಇಲ್ಲದಿದ್ದರೆ ಯಾರೊ ಹೇಳಿದ್ದನ್ನು ಕೇಳುವಂಥ ಮನೋಭಾವ ಮೂಡುತ್ತದೆ. ಜನರಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವೆಂಬುದನ್ನರಿತು ಕೆಲ ವಂಚಕರು ಅದರ ಲಾಭ ಪಡೆಯುತ್ತಿದ್ದಾರೆ. ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಆದ್ದರಿಂದ ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಎಲ್ಲರೂ ತಿಳಿಯಬೇಕಿದೆ. ಜೋತಿಷ್ಯ, ಸಂಖ್ಯಾಶಾಸ್ತ್ರ, ಪವಾಡಗಳು ವಂಚನೆಯ ನಾನಾ ವಿಧಗಳಾಗಿವೆ ಎಂದರು.

ಸ್ವರ್ಗ, ನರಕವೆಂದು ಹೇಳಿ ದುಡಿಯುವ ವರ್ಗವನ್ನು ಶೋಷಣೆ ಮಾಡಲಾಗುತ್ತದೆ. ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ವಂಚನೆಗಳನ್ನು ಬಯಲಿಗೆ ಎಳೆಯಬೇಕಿದೆ. ವಿಜ್ಞಾನದಿಂದ ಪ್ರಗತಿ ಸಾಧ್ಯ. ಈ ಮೊದಲು ಚೀನಾ ನಮ್ಮ ದೇಶಕ್ಕಿಂತ ಹಿಂದಿತ್ತು. ಈಗ ಅದು ಎಲ್ಲ ದೇಶಗಳನ್ನು ಮೀರಿಸುವಂತೆ ಬೆಳೆದಿದೆ. ಜಪಾನ್ ಕೂಡ ಪ್ರಗತಿ ಸಾಧಿಸಿದೆ. ಇದಕ್ಕೆಲ್ಲ ವೈಜ್ಞಾನಿಕ ಚಿಂತನೆಗಳು ಕಾರಣ. ವಾಸ್ತವ ಅರ್ಥ ಮಾಡಿಕೊಂಡರೆ ದೇಶದ ಪ್ರಗತಿ ಸಾಧ್ಯ ಎಂದರು.

ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net