

ಅರಸೀಕೆರೆ: ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಬಿಇಒ ಮೋಹನ್‌ಕುಮಾರ್ ಹೇಳಿದರು.
ನಗರದ ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿ, ಬದಲಾವಣೆ ಜಗದ ನಿಯಮ ಎನ್ನುವಂತೆ ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ವೈಜ್ಞಾನಿಕ ಚಿಂತನಾ ಮನೋಭಾವ ಬೆಳಸಿಕೊಳ್ಳಬೇಕು. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರು ಈ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಗುಂಪು ವಿಭಾಗದಲ್ಲಿ ಬಾಗೇಶಪುರ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ಹಾಗೂ ಧನಲಕ್ಷ್ಮೀ ಪ್ರಥಮ, ಶಿಕ್ಷಕರ ವಿಭಾಗದಲ್ಲಿ ಕೆ.ಕೆ.ದಿವ್ಯಾ, ವೈಯಕ್ತಿಕ ವಿಭಾಗದಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆ ಅರಸೀಕೆರೆ ಮೊಹಮದ್ ಸುಹಾನ್ ಪ್ರಥಮ, ಗಂಡಸಿ ಶಂಭುಲಿಂಗೇಶ್ವರ ಪ್ರೌಢಶಾಲೆಯ ಸಚಿನ್ ದ್ವಿತೀಯ ಹಾಗೂ ರಂಗಪುರ ಪ್ರೌಢಶಾಲೆಯ ಜೆ.ಆರ್. ಕಾವ್ಯಾ ತೃತೀಯ ಸ್ಥಾನ ಪಡೆದರು.
ಇಸಿಒ ಗಿರೀಶ್, ನೋಡಲ್ ಅಧಿಕಾರಿ ಚಿದಾನಂದ್, ತಾಲೂಕು ವಿಜ್ಞಾನ ಸಂಘದ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಮಾರುತಿ, ಮೋಹನ್ ಕುಮಾರ್ ಇನ್ನಿತರರು ಇದ್ದರು.