ವೈಜ್ಞಾನಿಕ ಕಸ ವಿಲೇಗೆ ಆದ್ಯತೆ ನೀಡಿ

18CBP2 (1)
Published on

ಚಿಕ್ಕಬಳ್ಳಾಪುರ : ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸ್ವಚ್ಛತೆ ಕಾಪಾಡುವ ಸಲುವಾಗಿ ಪ್ರತಿನಿತ್ಯ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಆರ್.ಲತಾ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭಾ ಕಚೇರಿಯ ಸರ್ ಎಂ.ವಿ.ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಚ್ಛತೆ ಮತ್ತು ಕರೊನಾ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಜಿಲ್ಲಾ ಕೇಂದ್ರದಲ್ಲಿ ಪ್ರತಿ ವಾರ್ಡ್‌ನಲ್ಲೂ ತ್ಯಾಜ್ಯ ವಿಲೇವಾರಿ ಉಸ್ತುವಾರಿಗಾಗಿ ಪ್ರತ್ಯೇಕ ಸ್ವಚ್ಛತೆ ನಾಯಕತ್ವ ನಿರ್ವಹಣೆಯ ತಂಡ ರಚಿಸಬೇಕು. ಯಾವುದೇ ಕಾರಣಕ್ಕೂ ಬಡಾವಣೆಯ ರಸ್ತೆ, ಮೈದಾನ ಸೇರಿ ಎಲ್ಲೂ ಕಸದ ರಾಶಿ ಬೀಳದಂತೆ ನೋಡಿಕೊಳ್ಳುವುದರ ಜತೆಗೆ ಮನೆ ಮನೆಗೂ ತೆರಳಿ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಬೇಕು ಎಂದರು.

ಈಗಾಗಲೇ ಕಸವನ್ನು ಎಲ್ಲೆಂದರಲ್ಲಿ ಎಸೆಯದಿರುವುದರ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರು ಯಾರಾದರೂ ನಿಯಮ ಉಲ್ಲಂಸಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು ಎಂದು ತಿಳಿಸಿದರು.ಪೌರಾಯುಕ್ತ ಲೋಹಿತ್ ಮಾತನಾಡಿ, ಕರೊನಾ ಸೋಂಕಿನ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಪ್ರತಿನಿತ್ಯ ವಾರ್ಡ್‌ನಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಬಗ್ಗೆ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ಲಕ್ಷಣಗಳುಳ್ಳವರಿಗೆ ಪರೀಕ್ಷೆ

ವಾರ್ಡ್‌ನಲ್ಲಿ ಕರೊನಾ ಸೋಂಕಿನ ತಡೆಯ ಮುಂಜಾಗ್ರತಾ ಕ್ರಮಗಳ ಕಟ್ಟುನಿಟ್ಟಿನ ಪಾಲನೆಯ ಬಗ್ಗೆ ಅರಿವು ಮೂಡಿಸುವುದರ ಜತೆಗೆ ರೋಗ ಗುಣ ಲಕ್ಷಣಗಳ ವ್ಯಕ್ತಿಗೆ ಪರೀಕ್ಷೆ ಮಾಡಿಸಲು ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳ ತ್ವರಿತ ಪತ್ತೆ, ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಆಯಾ ವಾರ್ಡ್ ವ್ಯಾಪ್ತಿಯ ಅಧಿಕಾರಿಗಳು ಜನ ವಸತಿ ಪ್ರದೇಶಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಸೋಂಕಿನ ನಿಯಂತ್ರಣದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ಕರೊನಾ ಲಕ್ಷಣಗಳುಳ್ಳವರು ಕಂಡು ಬಂದಲ್ಲಿ ಸೋಂಕಿನ ಪತ್ತೆ ಪರೀಕ್ಷೆಗೊಳಪಡಿಸಬೇಕು. ವಾರ್ಡ್‌ವಾರು ಅನಿರೀಕ್ಷಿತ ಭೇಟಿ ನೀಡಿ ಸ್ವಚ್ಛತೆ ನಿರ್ವಹಣೆ, ಜನರ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುವುದು. ಯಾವುದೇ ಲೋಪಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ರೇಣುಕಾ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಆಯುಕ್ತ ಎನ್.ಭಾಸ್ಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net