

ಚಿತ್ರದುರ್ಗ: ಮೌಢ್ಯ ತೊರೆದು ವೈಚಾರಿಕತೆ ಮೈಗೂಡಿಸಿಕೊಳ್ಳಲು ಅರಿವು ಮೂಡಿಸಿದ ಹರಿಕಾರ ಬಸವಣ್ಣ ಎಂದು ಉಳವಿ ಅಕ್ಕ ನಾಗಲಾಂಬಿಕ ಯೋಗಪೀಠದ ಪೀಠಾಧ್ಯಕ್ಷೆ ಮಾತೆ ಶ್ರೀ ದಾನೇಶ್ವರಿ ಮಾತಾಜಿ ಹೇಳಿದರು.
ಬಸವ ಮಂಟಪದಲ್ಲಿ ಶುಕ್ರವಾರ ನಡೆದ ವಿಶ್ವ ಗುರು ಬಸವಣ್ಣ ಅವರ 891ನೇ ಜಯಂತಿಯ ಸಾನಿಧ್ಯವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿದ್ದ ಜಾತಿ ವ್ಯವಸ್ಥೆ ಧಿಕ್ಕರಿಸಿ ಅಸಮಾನತೆ ನಿರ್ಮೂಲನೆಗೆ, ಸಮಾನತೆಗಾಗಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಸ್ತ್ರೀ-ಪುರುಷರಿಬ್ಬರು ಸಮಾನರೆಂಬ ಅರಿವು ಮೂಡಿಸಿದ ಮಹಾ ಶರಣ ಎಂದು ಬಣ್ಣಿಸಿದರು.
ಬಸವ ತತ್ವದಲ್ಲಿ ನಂಬಿಕೆಯನ್ನಿಟ್ಟು ಜೀವನದಲ್ಲಿ ಸದ್ಗುಣ, ಸನ್ಮಾರ್ಗದಲ್ಲಿ ಸಾಗಬೇಕು. ಮುಂದಿನ ಶರಣ ಮೇಳದ ವೇಳೆಗೆ 25 ವಚನಗಳನ್ನು ಮಕ್ಕಳಿಗೆ ಕಂಠಪಾಠ ಮಾಡಿಸಿ, ಬಸವ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪ ತೊಡಿ ಎಂದು ಸಲಹೆ ನೀಡಿದರು.
ಪತ್ರಕರ್ತ ಎಸ್.ಟಿ.ನವೀನ್‌ಕುಮಾರ್ ಮಾತನಾಡಿ, ಬಸವಣ್ಣನ ಅನುಯಾಯಿಗಳಾದ ನಾವೆಲ್ಲರೂ ಶರಣರ ವಚನ ಸಾಹಿತ್ಯದಂತೆ ನಡೆಯಬೇಕು ಎಂದರು.
ಡಾ.ಸತೀಶ್‌ಕುಮಾರ್, ನಿವೃತ್ತ ಶಿಕ್ಷಕ ಈರಪ್ಪ ಮಾತನಾಡಿದರು. ಬೆಳಗ್ಗೆ 9ಕ್ಕೆ ಮೆರವಣಿಗೆ, ಗುರುಬಸವ ಪೂಜೆ, ಧ್ವಜಾರೋಹಣ, ತೊಟ್ಟಿಲು ಕಾರ್ಯ, ಮಕ್ಕಳಿಂದ ವಚನ ನೃತ್ಯ ನಡೆದವು.
ಶ್ರೀ ಬಸವೇಶ್ವರಿ ಮಾತಾಜಿ, ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಎಚ್.ಶಿವಣ್ಣ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಜೆ.ಸಿ.ಮನೋಹರ್, ಸವಿತಾ ಸಮಾಜದ ರಾಜಣ್ಣ ಇತರರಿದ್ದರು.