

ಯಳಂದೂರು: ಜಾನಪದ ಕಲೆ, ನಮ್ಮ ಸಂಸ್ಕೃತಿ ನವಯುಗದ ವೈಚಾರಿಕತೆಗೆ ಸಿಲುಕಿ ನಶಿಸುತ್ತಿವೆ ಎಂದು ಪಟ್ಟಣದ ಸುವರ್ಣ ಶ್ರೀನಿವಾಸಸ್ವಾಮಿ-ಪದ್ಮಾವತಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮನಾಭ ಆಚಾರ್ಯ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲೂಕಿನ ಮದ್ದೂರು ಗ್ರಾಮದ ಚಿಕ್ಕನಂಜಮ್ಮ ಮತ್ತು ಇರಸವಾಡಿ ಗ್ರಾಮದ ನಂಜಮ್ಮ ತಂಡದವರಿಂದ ಶನಿವಾರ ಪಟ್ಟಣದ ಸುವರ್ಣ ಶ್ರೀನಿವಾಸಸ್ವಾಮಿ-ಪದ್ಮಾವತಿ ದೇವಸ್ಥಾನ(ಸುವರ್ಣ ತಿರುಪತಿ) ಆವರಣದಲ್ಲಿ ಆಯೋಜಿಸಿದ್ದ ಸೋಬಾನೆ ಪದ, ಜಾನಪದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈವಿಕ ವಿಧಿ-ವಿಧಾನ, ಪೂಜಾ ಕೈಂಕರ್ಯಗಳ ಮೇಲೆ ನಿರಾಸಕ್ತಿ ತೋರುತ್ತಿರುವುದು ಸಾಮಾನ್ಯವಾಗುತ್ತಿವೆ. ಆದ್ದರಿಂದ ನವಯುಗದ ಮಹಿಳೆಯರು ಕಲೆ, ಸಂಸ್ಕೃತಿ ಉಳಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಯಳಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯರಿಯೂರು ನಾಗೇಂದ್ರ ಮಾತನಾಡಿ, ಸೋಬಾನೆ ಪದ ಕಲಾವಿದರಿಗೆ ಸರ್ಕಾರ ಮಾಸಾಶನ ಹೆಚ್ಚಳ ಮಾಡಬೇಕು. ಕಲಾವಿದರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೂಡಬೇಕು ಒತ್ತಾಯಿಸಿದರು. ದೇವಸ್ಥಾನ ಆವರಣದಲ್ಲಿ ಮದ್ದೂರಿನ ಚಿಕ್ಕನಂಜಮ್ಮ ಮತ್ತು ತಂಡದವರು ಸೋಬಾನೆ ಪದಗಳನ್ನು, ಇರಸವಾಡಿ ಗ್ರಾಮದ ನಂಜಮ್ಮಮತ್ತು ತಂಡದವರು ಬಿಳಿಗಿರಂಗನಾಥಸ್ವಾಮಿಯ ಜಾನಪದ ಗೀತೆಗಳನ್ನು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಮದ್ದೂರು ಗ್ರಾಮದ ಮುಖಂಡರಾದ ಸಂಪತ್, ಮುರುಳಿ, ಮರಿಸ್ವಾಮಿ, ನಂಜುಂಡಸ್ವಾಮಿ, ಮದ್ದೂರು ಗ್ರಾಪಂ ಮಾಜಿ ಅಧ್ಯಕ್ಷರಾದ ನಂಜುಂಡ ಸ್ವಾಮಿ, ಕಲಾವಿದರಾದ ಯಶೋದಮ್ಮ, ಚಿನ್ನಮ್ಮ, ನಂಜಮ್ಮ, ಚಿಕ್ಕನಂಜಮ್ಮ ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.