ವೈಚಾರಿಕತೆ ಕಣ್ತೆರೆಯಲು ವಿವೇಕ ಮುಖ್ಯ : ಅವಧೂತ ವಿನಯ್​ ಗುರೂಜಿ ಅಭಿಪ್ರಾಯ

1
Published on

ಕೋಲಾರ: ಜಗತ್ತಿನಲ್ಲಿ ಎಲ್ಲಕ್ಕಿಂತ ಮುಖ್ಯವಾಗಿರುವುದು ಮಾನವ ಧರ್ಮ. ಸಸ್ಯಕ್ಕೆ ತಾಯಿ ಬೇರು ಹೇಗೆ ಮುಖ್ಯವೋ ಹಾಗೇ ವೈಚಾರಿಕತೆ ಕಣ್ಣು ತೆರೆಯಬೇಕಾದರೆ ಅಧ್ಯಯನ, ವಿವೇಕ ಮುಖ್ಯ. ಇದನ್ನು ನಾವು ನೋಡಬೇಕಾದರೆ ಬಾಹ್ಯ ಕಣ್ಣು ಬಹಳ ಮುಖ್ಯ, ಹೀಗಾಗಿ ನೇತ್ರ ಚಿಕಿತ್ಸಾ ಶಿಬಿರ ನಿಜಕ್ಕೂ ಸ್ತುತ್ಯಾರ್ಹ ಎಂದು ಅವಧೂತ ವಿನಯ್​ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್​, ಮಾನವ ಹಕ್ಕುಗಳ ಜಾಗೃತಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜನಪ್ರತಿನಿಧಿಗಳು ಜಾತಿ, ಧರ್ಮ, ನೋಡದೆ ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡಾಗ ಮಾನವೀಯತೆಗೆ ಅರ್ಥ ಬರುತ್ತದೆ. ಎಲ್ಲರೂ ಲೋಕದ ಹಿತ ಗಮನದಲ್ಲಿಟ್ಟುಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ನಮಗೆ ಸಮಾಜ ಏನು ಕೊಟ್ಟಿದೆ ಎಂಬುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಆತ್ಮವನ್ನು ಪ್ರಶ್ನಿಸಿಕೊಳ್ಳುವ ಮನಸ್ಥಿತಿ ನಮ್ಮಲ್ಲಿ ಬರಬೇಕು, ಬದುಕಿರುವಷ್ಟು ದಿನವೂ ಸಮಾಜಕ್ಕೆ ಕೈಲಾದಷ್ಟು ನೆರವು ನೀಡುವ ಮೂಲಕ ಹೃದಯವಂತಿಕೆ ತೋರಬೇಕು ಎಂದರು.

ಒಬ್ಬ ವ್ಯಕ್ತಿ ಅಧಿಕಾರದಲ್ಲಿದ್ದು ಬದುಕಿದ್ದಾಗ ಅವರ ಹಿಂದೆ, ಮುಂದೆ ಇರುವ ಜನರ ಗುಂಪನ್ನು ನೋಡಿ ಅವರನ್ನು ಅಳೆಯುವುದಲ್ಲ. ಅವರು ಸತ್ತ ನಂತರ ಶವಯಾತ್ರೆಯಲ್ಲಿ ಅವರೊಂದಿಗೆ ಸಾಗುವ, ಅವರ ಕುರಿತು ನಾಲ್ಕು ಒಳ್ಳೆಯ ಮಾತು ಹೇಳುವುದನ್ನು ಕೇಳಿ ಅವರನ್ನು ಅಳೆಯಬೇಕು. ಈ ನಿಟ್ಟಿನಲ್ಲಿ ನಾವು ಮಾಡಿದ ಒಳ್ಳೆಯ ಕೆಲಸ ಸದಾ ನಮ್ಮನ್ನು ಸ್ಮರಿಸುವಂತೆ ಮಾಡುತ್ತದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಜನರ ಅಂಧಕಾರ ಹೋಗಲಾಡಿಸುವ ಕಾರ್ಯ ಶ್ಲಾಘನೀಯವಾಗಿದೆ. ಆದರೆ ಸಮಾಜದಲ್ಲಿ ಅಂಧಕಾರವಿದ್ದು, ಅದನ್ನು ಹೋಗಲಾಡಿಸುವ ಕಾರ್ಯವೂ ಜತೆಜತೆಯಲ್ಲೇ ನಡೆಯಬೇಕು. ಶಾಂತಿ, ನೆಮ್ಮದಿಯ ವಾತಾವರಣ ನಿಮಾರ್ಣಕ್ಕೆ ಸಾಕಾರವಾಗಬೇಕು ಎಂದರು.

ಶಿಬಿರದಲ್ಲಿ 1ಸಾವಿರಕ್ಕೂ ಹೆಚ್ಚು ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು. ಕೋವಿಡ್​ ಸಂದರ್ಭ ಕೆಲಸ ಮಾಡಿದ ಆರೋಗ್ಯ ನೌಕರರು, ಆಂಬುಲೆನ್ಸ್​ ಚಾಲಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್​ಬಾಬು, ಶಂಕರ ಕಣ್ಣಿನ ಆಸ್ಪತ್ರೆಯ ಡಾ ನೀಹಾರಿಕಾ, ಮಾನವ ಹಕ್ಕುಗಳ ಜಾಗೃತಿ ಸಂಸ್ಥೆ ರಾಜ್ಯಾಧ್ಯಕ್ಷ ಬಿ.ಟಿ.ವಿಶ್ವನಾಥ್​, ಪದಾಧಿಕಾರಿಗಳಾದ ಬಸವರಾಜ್​, ಮಂಜುನಾಥ, ರಂಜಿತ್​, ಕಿರಣ್​, ಜಿಲ್ಲಾ ಸಹಕಾರಿ ಯೂನಿಯನ್​ ನಿರ್ದೇಶಕಿ ಅರುಣಮ್ಮ, ಕೆಯುಡಿಎ ಸದಸ್ಯೆ ಮಮತಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net