ವೈಚಾರಿಕ ಸಂಶೋಧಕ ಕಲಬುರಗಿ

kasapa
Published on

ಬೀದರ್: ಡಾ.ಎಂ.ಎಂ. ಕಲಬುರಗಿ ಅವರ 100 ಕೃತಿಗಳಲ್ಲಿ 75 ಕೃತಿಗಳು ವೈಚಾರಿಕ ಸಂಶೋಧನೆಗಳಿಗೆ ಸಂಬಂಧಿಸಿವೆ ಎಂದು ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವ ಕೇಂದ್ರದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಎಂ.ಎಂ. ಕಲಬುರಗಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ಯ ಪ್ರತಿಪಾದನೆ ಮಾಡಿದವರೆಲ್ಲರ ಹತ್ಯೆಗಳು ನಡೆದಿರುವುದು ದುರದೃಷ್ಟಕರ. ಕಲಬುರಗಿ ಅವರ ಹತ್ಯೆಯಾದರೂ ಅವರ ತತ್ವ, ಸಿದ್ಧಾಂತ ಯಾರಿಂದಲೂ ಮರೆಮಾಚಲು ಸಾಧ್ಯವಿಲ್ಲ. ಅವರು ನಮ್ಮೊಂದಿಗೆ ಇನ್ನೂ ಜೀವಂತವಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಹಿರಿಯ ಸಾಹಿತಿ ಭಾರತಿ ವಸ್ತ್ರದ ಮಾತನಾಡಿ, ಎಂ.ಎಂ. ಕಲಬುರಗಿ ಬೆದರಿಕೆ, ಒತ್ತಡಕ್ಕೂ ಜಗ್ಗದೆ ತಮ್ಮ ಬದ್ಧತೆ ನಿಭಾಯಿಸುವ ಛಲವಂತರಾಗಿದ್ದರು. ಅದಕ್ಕಾಗಿ ಅವರು ಪ್ರಾಣ ತೆರಬೇಕಾಯಿತು ಎಂದರು.
ಪೂಜ್ಯ ಬಸವಗೀತಾ ತಾಯಿ ಮಾತನಾಡಿದರು. ಅನುದಾನ ರಹಿತ, ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಂದ್ರಕುಮಾರ ಮಣಿಗೇರೆ ಹಾಗೂ ಧರ್ಮಸ್ಥಳದ ಮಂಜುನಾಥೇಶ್ವರ ಯೋಜನೆ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾದ ವಿರೂಪಾಕ್ಷ ಗಾದಗಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಪಂಚಯ್ಯ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ವಿದ್ಯಾವತಿ ಬಲ್ಲೂರ ಇತರರಿದ್ದರು. ಶಿವಶಂಕರ ಟೋಕರೆ ನಿರೂಪಣೆ ಮಾಡಿದರು. ರೇವಣಪ್ಪ ಮೂಲಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net