

ಬಾಗಲಕೋಟೆ: ಭಾರತೀಯ ಹಬ್ಬಳಿಗೆ ತನ್ನದೆಯಾದ ಭವ್ಯ ಪರಂಪರೆ, ವೈಜ್ಞಾನಿಕ, ವೈಚಾರಿಕ ತಳಹದಿ ಮೇಲೆ ನಿಂತಿವೆ. ಮೌಲ್ಯಗಳನ್ನು ಅನುಸರಿಸುತ್ತಾ ಮೌಢ್ಯತೆಗಳಿಗೆ ಮುಕ್ತಿ ನೀಡುವ ಕೆಲಸಾ ಮಾಡೋನ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಹೇಳಿದರು.
ತಾಲೂಕಿನ ಬೇವೂರ ಗ್ರಾಮದಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಕಾಲಾಂತರದಲ್ಲಿ ಆ ಆಚರಣೆಗಳನ್ನು ತಿರುಚಿ ಮೌಢ್ಯತೆ ಹೆಣೆದಿದ್ದಾರೆ. ಇದರಿಂದ ಅನೇಕ ಸಾಮಾಜಿಕ ಸಮಸ್ಯೆಗಳು ತಾಂಡವವಾಡುತ್ತೀವೆ. ಹಾಗಾಗಿ ನಾವು ನಮ್ಮ ಸಂಸ್ಕೃತಿಯಲ್ಲಿ ಬರುವ ಎಲ್ಲಾ ಹಬ್ಬಗಳನ್ನು ವೈಜ್ಞಾನಿಕ ಹಾಗು ವೈಚಾರಿಕ ನೆಲೆಗಟ್ಟಿನಲ್ಲಿ ಆಚರಿಸುವ ಮೂಲಕ ಅರ್ಥಪೂರ್ಣವಾಗಿ ಮೌಲ್ಯಗಳನ್ನು ಕಿತ್ತೆಸೆಯಬೇಕಿದೆ. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆಯು ನಿರಂತರವಾಗಿ ಅನೇಕ ಬಗೆಯಲ್ಲಿ ಸಮಾಜದಲ್ಲಿ ಬೇರೂರಿರುವ ಮೌಢ್ಯಗಳ ನಿವಾರಣಾ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ನಾಗರಪಂಚಮಿಯಂದು ಕಲ್ಲು ನಾಗರಕ್ಕೆ ಹಾಲನ್ನು ಎರೆಯುವ ಮೂಲಕ ಅಮೂಲ್ಯವಾದ ಹಾಲನ್ನು ವ್ಯರ್ಥಮಾಡುವ ಬದಲು ಶಾಸ್ತ್ರೋಕ್ತವಾಗಿ ಮಾತ್ರ ಅಲ್ಪ ಪ್ರಮಾಣದಲ್ಲಿ ಹಾಲು ಹಾಕಿ ಬಹುಪಾಲು ಹಾಲು ಅಪೌಷ್ಟಿಕತೆ ಬಳಲುತ್ತಿರುವ ಮಕ್ಕಳಿಗೆ, ಅನಾಥರಿಗೆ, ನಿರ್ಗತಿಕರಿಗೆ ಕೊಡಮಾಡಬೇಕು. ಬಸವ ಪಂಚಮಿ ಮೌಡ್ಯ ಮುಕ್ತ ನಾಡು ನಿರ್ಮಿಸುವ ಸಂಕಲ್ಪ ಮಾಡಬೇಕು ಎಂದರು.
ಇನ್ನು ನಾಗರ ಪಂಚಮಿಯು ಮಳೆಗಾಲದ ಮಧ್ಯದಲ್ಲಿ ಶ್ರಾವಣ ಮಾಸದ ಆರಂಭದಲ್ಲಿ ಬರುವ ಕನ್ನಡಿಗರು ಮಾತ್ರ ಆಚರಿಸುವ ಒಂದು ಮಹತ್ವದ ಹಬ್ಬವಾಗಿದೆ. ಜೂನ್ ತಿಂಗಳಿಂದ ಆರಂಭಗೊಂಡು ಮಳೆಗಾಲದಲ್ಲಿ ಬಿಟ್ಟುಬಿಡದ ಕೃಷಿ ಚಟುವಟಿಕೆಗಳಿಂದ ಹಳ್ಳಿಗಾಡಿನ ರೈತಾಪಿ ಜನರಿಗೆ ಸ್ವಲ್ಪ ಬಿಡುವಿನ ಕಾಲವದು. ಹೊಲಗಳನ್ನು ಉತ್ತು, ಬಿತ್ತು ದಣಿದ ದೇಹಕ್ಕೆ ಒಂದಷ್ಟು ವಿಶ್ರಾಂತಿ ಹಾಗು ಮನರಂಜನೆ ನೀಡುವ ಹಿನ್ನೆಲೆಯಲ್ಲಿ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮದುವೆಗಳು ವೈಶಾಖ ಮಾಸದಲ್ಲಿ ಮಾತ್ರ ಜರುಗುತ್ತಿದ್ದವು. ಆಗ ಗಂಡನ ಮನೆಗೆ ಹೋದ ಹೆಣ್ಣುಮಗಳನ್ನು ಪಂಚಮಿಗೆ ತವರು ಮನೆಗೆ ಕರೆದುಕೊಂಡು ಬಂದು ಸಂಭ್ರಮಿಸುವ ಸಂದರ್ಭವೇ ಪಂಚಮಿ ಹಬ್ಬದ ವಿಶೇಷತೆ ಎಂದು ಹಬ್ಬದ ವೈಶಿಷ್ಠತೆ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಜಿ.ಜಿ. ಮಾಗನೂರ , ವೈಜಾಪುರ , ರವಿ ತಳವಾರ, ಕುಪ್ಪನ್ನ ಪೂಜಾರಿ, ಜಯರಾಜ್ ಹಾದಿಕರ, ಮಹೇಶ್ ಗದ್ದನಕೇರಿ ಮತ್ತು ಗ್ರಾಮದ ಗುರುಹಿರಿಯರು,ಮಕ್ಕಳು ಉಪಸ್ಥಿತರಿದ್ದರು.