

ಬೀದರ್: ಇಲ್ಲಿಯ ಬಿದರಿ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯಿಂದ ಪ್ರಥಮ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಂಗೀತ ವಿದ್ವಾಂಸ ಶ್ರೀ ವೈಕುಂಠದತ್ತ ಮಹಾರಾಜ ಅವರನ್ನು ಆಯ್ಕೆ ಮಾಡಲಾಗಿದೆ.
ಜ.3ರಂದು ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 15 ಸಾವಿರ ರೂ. ನಗದು, ಫಲಕದೊಂದಿಗೆ ವೈಕುಂಠದತ್ತ ಮಹಾರಾಜರಿಗೆ ಸನ್ಮಾನಿಸಲಾಗುತ್ತದೆ ಎಂದು ವೇದಿಕೆ ಅಧ್ಯಕ್ಷೆಯಾದ ಗಾಯಕಿ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.
ಪ್ರಶಸ್ತಿ ಹಿನ್ನೆಲೆಯಲ್ಲಿ ವೇದಿಕೆ ಪದಾಧಿಕಾರಿಗಳ ನಿಯೋಗ ಶನಿವಾರ ತಾದಲಾಪುರದಲ್ಲಿರುವ ವೈಕುಂಠದತ್ತ ಮಹಾರಾಜರ ನಿವಾಸಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಲು ಆಗಮಿಸುವಂತೆ ವೀಳ್ಯ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಬಿದರಿ ವೇದಿಕೆಯ ಮೊದಲ ಪ್ರಶಸ್ತಿಗೆ ಬಹುಮುಖಿ ಕಲಾ ಪ್ರತಿಭೆಯುಳ್ಳ ನಿಮ್ಮನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ವೇದಿಕೆಯು ಇಲ್ಲಿ ಸಂಗೀತ, ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಕಲೆ ಮತ್ತು ಕಲಾವಿದರನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಇದೀಗ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ನೀಡುತ್ತಿರುವುದು ಮಾದರಿ ಎಂದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಶ್ರೀ ವೈಕುಂಠದತ್ತ ಮಹಾರಾಜ, ಪ್ರಶಸ್ತಿಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ ಎಂದರು. ಪ್ರಮುಖರಾದ ಸುಬ್ರಹ್ಮಣ್ಯ ಪ್ರಭು, ವಿಜಯಕುಮಾರ ಸೋನಾರೆ, ಬಾಬುರಾವ ದಾನಿ, ಡಾ. ರಾಜಕುಮಾರ ಹೆಬ್ಬಾಳೆ, ಪ್ರಭುಲಿಂಗ ಸ್ವಾಮಿ, ರಾಜೇಶ ಕುಲಕರ್ಣಿ, ಪೃಥ್ವಿರಾಜ್, ಶ್ರೀಮಂತ ಸಪಾಟೆ, ಮಹಾರುದ್ರ ಡಾಕುಳಗೆ, ಸುನೀಲ ಭಾವಿಕಟ್ಟಿ, ಎಂ.ಪಿ. ಮುದಾಳೆ, ದೇವಿದಾಸ ಜೋಶಿ, ಸಿದ್ದು ಜಮಾದಾರ, ಅಪ್ಪಾರಾವ್ ಸೌದಿ ಇತರರಿದ್ದರು.