

ಅರಸೀಕೆರೆ: ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಸೋಮವಾರ ತಾಲೂಕಿನ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ನೆಲಸಿರುವ ಶ್ರೀಲಕ್ಷ್ಮಿವೆಂಕಟರಮಣ ಸ್ವಾಮಿ ಸನ್ನಿಧಿಗೆ ಭಕ್ತ ಸಾಗರವೇ ಹರಿದು ಬಂದಿತ್ತು.
ಬೆಟ್ಟದ ತಪ್ಪಲಿನಲ್ಲಿರುವ ಶೇಷಶಯನ ಶ್ರೀಲಕ್ಷ್ಮೀರಮಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮುಂಜಾನೆಯಿಂದಲೇ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಿರ್ವಿಘ್ನವಾಗಿ ನೆರವೇರಿದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದರೆ,ಮತ್ತೆ ಕೆಲವರು ಬೆಟ್ಟದಮೇಲಿರುವ ಗೋವಿಂದರಾಜಸ್ವಾಮಿ ಸನ್ನಿಧಿಗೂ ತೆರಳಿ ಪೂಜೆ ಸಲ್ಲಿಸಿದರು.
ಬಿಳಿಕಲ್ ಶ್ರೀರಂಗನಾಥಸ್ವಾಮಿ, ಗುತ್ತಿನ ಕೆರೆ, ಗಂಜಿಗೆರೆ ಪುರ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇಗುಲಗಳಲ್ಲಿಯೂ ವೈಕುಂಠ ಏಕಾದಶಿ ಸಂಭ್ರಮ ಕಳೆಗಟ್ಟಿತ್ತು. ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು ದೇವರ ದರ್ಶನ ಪಡೆದಿದ್ದು ವಿಶೇಷವಾಗಿತ್ತು.ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ಸೌಲಭ್ಯ ಕಲ್ಪಿಸಿದ್ದು ಮಂಜಾಗ್ರತಾ ಕ್ರಮವಗಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.