

ಹಾಸನ: ವೈಕುಂಠ ಏಕಾದಶಿಯ ಅಂಗವಾಗಿ ಮಂಗಳವಾರ ನಗರದ ವಿವಿಧ ದೇವಸ್ಥಾನಗಳ ಮುಖ್ಯದ್ವಾರವನ್ನು ಸ್ವರ್ಗದ ರೀತಿ ಅಲಂಕಾರ ಮಾಡಲಾಗಿದೆ. ಬೆಳಗಿನಿಂದಲೇ ಸಾವಿರಾರು ಜನ ಭಕ್ತಾಧಿಗಳು ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ವ್ಯವಸ್ಥಾಪಕರಾದ ಗುರುರಾಜು ಕುಲಕರ್ಣಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವೈಕುಂಠ ಏಕಾದಶಿಯನ್ನು ಪೌಷ ಪುತ್ರದಾ ಏಕಾದಶಿ, ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ದಿನ ವಿಷ್ಣು ಹಾಗೂ ವಿಷ್ಣುವಿನ ಅವತಾರದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಜನರ ನಂಬಿಕೆ. ವೈಕುಂಠ ಏಕಾದಶಿಯ ದಿನ ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಸಹ ಹೇಳಲಾಗುತ್ತದೆ ಎಂದರು.
ವೈಕುಂಠ ಏಕಾದಶಿ ವ್ರತವನ್ನು ಮಾಡುವವರು ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಿ, ಉಪವಾಸ ಮಾಡುವ ಸಂಕಲ್ಪ ಮಾಡುತ್ತಾರೆ. ಈ ಏಕಾದಶಿ ವ್ರತವನ್ನು ಆಚರಿಸುವರು, ಧೂಪ ಮಾಡಿ ದೀಪ ಬೆಳಗಿಸಿ, ನೈವೇದ್ಯ ಮಾಡಿ ಬಳಿಕ ಹದಿನಾರು ಪದಾರ್ಥಗಳಿಂದ ವಿಷ್ಣುವನ್ನು ವಿಶೇಷವಾಗಿ ಪೂಜಿಸುತ್ತಾರೆ. ಬಳಿಕ ವಿಷ್ಣು ಅಥವಾ ಆತನ ಅವತಾರದ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾವಿಷ್ಣುವಿಗೆ ಹೂವಿನ ಹಾರ, ನೈವೇದ್ಯ ಮತ್ತು ಬಾಳೆಹಣ್ಣು ಅರ್ಪಿಸುತ್ತಾರೆ. ವ್ರತ ಆಚರಿಸುವವರು ಕೊನೆಯಲ್ಲಿ ರಾತ್ರಿ ದೀಪದಾನ ಮಾಡುವುದು ಕೂಡ ಶ್ರೇಷ್ಠವಾಗಿದೆ. ವ್ರತದ ವೇಳೆ ಮಹಾವಿಷ್ಣುವಿನ ಮಂತ್ರ, ಶ್ರೀ ಹರಿ ಸ್ತೋತ್ರಂ, ವಿಷ್ಣು ಸಹಸ್ರ ನಾಮ ಮತ್ತು ಏಕಾದಶಿ ವ್ರತ ಕಥೆಯನ್ನು ಪಠಿಸುವುದರಿಂದ ವ್ರತ ಪೂರ್ಣಗೊಳ್ಳುತ್ತದೆ ಎಂಬುದು ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ ಎಂದು ತಿಳಿಸಿದರು.
ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಹಾಸನ ನಗರ ಹಾಗೂ ಜಿಲ್ಲೆಯಲ್ಲೂ ಕೂಡ ವೈಕುಂಠ ಏಕಾದಶಿಯ ಸಂಭ್ರಮ ಕಂಡು ಬಂದಿತು. ಹೀಗಾಗಿ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ- ಕೈಂಕರ್ಯಗಳು ನಡೆದವು. ವೈಕುಂಠ ಏಕಾದಶಿಯ ದಿನ ಬೆಳಗ್ಗೆ ದೇವರ ದರ್ಶನ ಮಾಡುವುದರಿಂದ ವಿಷ್ಣು ಎಲ್ಲರ ಕಷ್ಟಗಳನ್ನು ಆಲಿಸಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದು ಹೇಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹಾಸನ ನಗರದ ಮಹಾರಾಜ ಪಾರ್ಕ್ ಬಳಿ ಇರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ, ಹೊಸಲೈನ್ ರಸ್ತೆ ಬಳಿ ಇರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ವಿದ್ಯುತ್ ನಗರ ವೆಂಕಟೇಶ್ವರ ಕಾಲೇಜು ಬಳಿ ಇರುವ ಶ್ರೀ ಭೂ ದೇವಿ ಸಮೇತ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಭಾಗಗಳಲ್ಲಿರುವ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆಗಳು ಜರುಗಿದವು. ಬಂದ ಭಕ್ತಾಧಿಗಗಳಿಗೆ ಪ್ರಸಾದ ವಿತರಿಸಲಾಯಿತು.