ವೈ ಮನಸು ಮರೆಯಿರಿ ಒಗ್ಗೂಡಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ:ಬಿಜೆಪಿ ನಾಯಕರ ಭರ್ಜರಿ ಪ್ರಚಾರ

ವೈ ಮನಸು ಮರೆಯಿರಿ ಒಗ್ಗೂಡಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ:ಬಿಜೆಪಿ ನಾಯಕರ ಭರ್ಜರಿ ಪ್ರಚಾರ
Published on

ಹಾಸನ: ದೇಶ ಸುಭದ್ರವಾಗಿರಬೇಕು ಎಂಬ ದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿದ್ದು, ತಮ್ಮ ಎಲ್ಲಾ ವೈಮನಸುಗಳನ್ನು ಬದಿಗಿಟ್ಟು ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಕರೆ ನೀಡಿದರು.
ನಗರದ ರಿಂಗ್ ರಸ್ತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾಗಿ 10 ವರ್ಷದಲ್ಲಿ ದೇಶವನ್ನು ಯಾವ ರೀತಿ ಮುನ್ನಡೆಸಿದ್ದಾರೆ ಎಂಬುದು ದೇಶದ ಜನರಿಗೆ ಗೊತ್ತಿದೆ. ಎಂತಹ ಸಂಕಷ್ಟದ ಸಂದರ್ಭದಲ್ಲೂ ಕೂಡ ಎದೆಗುಂದದೆ ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಆದರೆ ಕಾಂಗ್ರೆಸ್‌ನವರಿಗೆ ಇದನ್ನು ಸಹಿಸಲಾಗದೆ ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳದೆ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಹಾಸನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಅವರ ಆರ್ಥಿಕ ನೀತಿ ಎಷ್ಟರ ಮಟ್ಟಿಗಿದೆ ಎಂದರೆ, ಗಂಡಸರ ಜೇಬಿನಿಂದ ಹಣ ತೆಗೆದು ಹೆಂಗಸರಿಗೆ ಕೊಡುವುದೇ ಇವರ ಸಾಧನೆ. ಇದನ್ನೇ ಎದೆ ಬಡಿದುಕೊಂಡು ಹೇಳಿಕೊಳ್ಳುತ್ತಿದ್ದಾರೆ. ಕತ್ತರಿ ಹಾಕುವ ಕಲೆ ಸಿದ್ದರಾಮನಾಮಿಕ್ಸ್ ಅವರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಯಾವೆಲ್ಲ ಬೆಲೆಗಳು ಕಡಿಮೆಯಾಗಿವೆ. ಈಗ ಯಾವೆಲ್ಲ ಬೆಲೆಗಳು ಹೆಚ್ಚಾಗಿವೆ ಎಂಬುದನ್ನು ಮಹಿಳೆಯರು ಮತ್ತು ಜನರು ಅರ್ಥ ಮಾಡಿಕೊಳ್ಳಬೇಕು. 15 ರೂಪಾಯಿಗೆ ಸಿಗುತ್ತಿದ್ದ ಪಹಣಿ ಇಂದು 30 ರೂ.ಗೆ ಏರಿಕೆಯಾಗಿದೆ. ವಾಸಸ್ಥಳ ಪತ್ರ, ಆದಾಯ ದೃಢೀಕರಣ ಪತ್ರ, ಬಾಂಡ್ ಪೇಪರ್, ವಿದ್ಯುತ್ ದರ, ಮದ್ಯದ ದರ ಹೆಚ್ಚಳ ಮಾಡಿ ಮಹಿಳೆಯರಿಗೆ 2000 ರೂ. ಕೊಡುತ್ತಿರುವುದೆ ನನ್ನ ಸಾಧನೆ ಎಂದು ಹೇಳುವ ಮೂಲಕ ನೀರಿಲ್ಲದೆ ತಲೆಬೋಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಅವರು ಇತ್ತೀಚೆಗೆ ರಾಜ್ಯದಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ್ದಾರೆ. ಅವರು ತಪ್ಪಾಗಿ ಹೇಳಿಕೆ ನೀಡಿಲ್ಲ. ಚುನಾವಣೆ ಮುಗಿದ ಮೇಲೆ ಬದಲಾವಣೆ ಮಾಡಲು ಅವರಲ್ಲಿ ಪಿತೂರಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಚಿವ ಬೈರತಿ ಸುರೇಶ್ ಅವರು ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಇದರಿಂದಲೇ ಇವರ ನಾಟಕ ಬಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಮಾತನಾಡಿ, ಹಾಸನ ಜೆಡಿಎಸ್‌ನ ಭದ್ರಕೋಟೆ. ಈ ಹಿಂದೆ ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪೈಪೋಟಿ ನಡೆಸುತ್ತಿದ್ದವು. ಆದರೆ ಈಗ ದೇಶದ ಹಿತದೃಷ್ಟಿಯಿಂದ ಮೋದಿ ಮತ್ತು ದೇವೇಗೌಡರು ಒಂದಾಗಿ ಮೈತ್ರಿ ಮಾಡಿಕೊಂಡಿದ್ದು ಇದಕ್ಕೆ ಎಲ್ಲರೂ ಕೈಜೋಡಿಸಿ ಹಾಸನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಕೆಲಸ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ, ಹಾಗೂ ಆಡಳಿತದಲ್ಲಿ ಕೂಡ ಶೂನ್ಯ ಸಾಧನೆ ಮಾಡಿದ್ದಾರೆ. ಅವರು ಸಮಾಜಗಳ ನಡುವೆ ಜಾತಿ-ಜಾತಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದು, ಅಧಿಕಾರ ಮತ್ತು ಕುರ್ಚಿಯನ್ನು ಉಳಿಸಿಕೊಳ್ಳಲು ಚುನಾವಣೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು. ಮೋದಿ ಅವರಿಗೆ ಶಕ್ತಿ ನೀಡಬೇಕು. ಆ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರನ್ನು ಕೂಡ ಗೆಲ್ಲಿಸಬೇಕು. ಈ ಜಿಲ್ಲೆಯಲ್ಲಿ ಬಿ.ಬಿ. ಶಿವಪ್ಪ, ಕೆ.ಎಚ್. ಹನುಮೇಗೌಡರು, ಎ.ಮಂಜು ಸೇರಿದಂತೆ ಹಲವರು ಬಿಜೆಪಿಯ ಶಾಸಕರಾಗುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ತನ್ನದೇ ಆದಂತಹ ಅಸ್ತಿತ್ವವನ್ನು ಇಟ್ಟುಕೊಂಡಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಅಕ್ಕಿಭಾಗ್ಯ ನೀಡುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು ಅಂತ್ಯೋದ್ಯಯ ಅನ್ನಭಾಗ್ಯ ಎಂಬ ಯೋಜನೆಯ ಜಾರಿಗೆ ತಂದಿದ್ದರು. ಆದರೆ ಸಿದ್ದರಾಮಯ್ಯ ಅವರು ನಾವು ತಂದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಖಚಿತ. ಈಗಾಗಲೇ ಬರಗಾಲದಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಾಂಗ್ರೆಸ್ ಗಿಡದಂತೆ ಹಬ್ಬಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ದೇಶಕ್ಕೆ ಸಂವಿಧಾನವನ್ನು ಕೊಟ್ಟಂತಹ ಡಾ. ಬಿಆರ್ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿ ಅವರಿಗೆ ಅನ್ಯಾಯ ಮಾಡಿದ್ದಾರೆ. ಈಗ ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು ಗಾಂಧೀಜಿ, ಅಂಬೇಡ್ಕರ್ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ ನಾಗೇಂದ್ರ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘಗೌಡ, ಡಿ.ವೈ. ಗೋಪಾಲ್, ಚಂದ್ರೇಗೌಡ, ವಾಸುದೇವ್, ಕಮಲ್ ಕುಮಾರ್, ಡಾ. ಅಂಜನಪ್ಪ, ದಯಾನಂದ್, ಈಶ್ವರ್, ಎಚ್.ಎಂ. ಸುರೇಶ್ ಕುಮಾರ್, ಹೊಂಗೆರೆ ರಘು ಇತರರು ಇದ್ದರು.

ನನ್ನ ಬಳಿ ಹಣ ಇಲ್ಲ, ನನಗೆ ಕೊಡಿ:
ಸಿ.ಟಿ. ರವಿ ಮಾತನಾಡುವ ವೇಳೆ ವೇದಿಕೆ ಮೇಲೆ ಬಂದ ಕೃಷ್ಣೇಗೌಡ ಎಂಬುವವರು ವೇದಿಕೆ ಮೇಲೆ ಪ್ರಜ್ವಲ್ ರೇವಣ್ಣ ಅವರಿಗೆ ಚುನಾವಣೆ ಖರ್ಚಿಗಾಗಿ ಹಣ ನೀಡುತ್ತಿದ್ದೇನೆ ಎಂದು ಹೇಳಿದರು. ಆಗ ಸಿ.ಟಿ.ರವಿ, ಅವರಿಗೆ ನೀಡುತ್ತಿರಾ? ಅವರ ಹತ್ತಿರ ಹಣ ಇದೆ. ನನ್ನ ಹತ್ತಿರ ಇಲ್ಲ. ನನಗೆ ಕೊಡಿ ಎಂದು ಹೇಳಿದರು. ಅದಕ್ಕೆ ಕೃಷ್ಣೇಗೌಡ ಅವರು, ನಿಮ್ಮ ಚುನಾವಣೆಗೂ ಕೂಡ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net