ವೇಶ್ಯಾವೃತ್ತಿಯಲ್ಲಿ ತೊಡಗಿರುವವರು ಸರ್ಕಾರದ ಸೌಲಭ್ಯಗಳಿಂದಲೂ ವಂಚಿತ : ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಕಳವಳ

mys
Published on

ಮೈಸೂರು: ವೇಶ್ಯಾವೃತ್ತಿಯಲ್ಲಿ ತೊಡಗಿರುವ ಜಿಲ್ಲೆಯ ಪರಿಶಿಷ್ಟ ಜಾತಿಯ ಹಲವಾರು ಮಹಿಳೆಯರು ಸರ್ಕಾರ ನೀಡುವ ಕನಿಷ್ಠ ಸೌಲಭ್ಯಗಳಿಂ ದಲೂ ವಂಚಿತರಾಗಿರುವುದು ಕಂಡು ಬಂದಿದ್ದು, ಅವರಿಗೆ ಸರ್ಕಾರದ ದೊರೆಯಬೇಕಾಗಿರುವ ಎಲ್ಲ ಸವಲತ್ತುಗಳನ್ನು ತಕ್ಷಣ ಕೊಡಿಸು ವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಕಿಶೋರ್ ಮಕ್ವಾನಾ ಹೇಳಿದರು.

ವೇಶ್ಯಾವೃತ್ತಿಯಲ್ಲಿ ನಿರತರಾಗಿರುವ ಜಿಲ್ಲೆಯ ಪರಿಶಿಷ್ಟ ಜಾತಿಯ ಮಹಿಳೆಯರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದೇನೆ. ಅಲ್ಲದೆ, ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದೇನೆ. ಸಾಕಷ್ಟು ಮಹಿಳೆಯರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಆಯುಷ್ಮಾನ್ ಕಾರ್ಡ್‌ಗಳು ಸಹ ಇಲ್ಲ. ಇವೆಲ್ಲವೂ ಪ್ರತಿಯೊಂದು ವ್ಯಕ್ತಿಗಳ ಕನಿಷ್ಠ ಅವಶ್ಯಕತೆಗಳಾಗಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೂಕ್ತ ದಾಖಲೆಗಳು ಇಲ್ಲದ ಕಾರಣಕ್ಕೆ ಆಧಾರ್ ಕಾರ್ಡ್, ಪಡಿತರ ಚೀಟಿ, ಆಯುಷ್ಮಾನ್ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಮಹಿಳೆಯರನ್ನು ಗುರುತಿಸಿ ಅವರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದರು.

ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ಸಹ ಸಮಾಜದಲ್ಲಿ ಗೌರವಯುತವಾದ ಬದುಕು ನಡೆಸಬೇಕು. ಅವರಿಗೂ ಎಲ್ಲರಂತೆ ಸೌಲಭ್ಯಗಳು ದೊರೆಯಬೇಕು. ಆ ಮೂಲಕ ಅವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಒಂದು ರಾಜ್ಯದಲ್ಲಿ ಎಸ್‌ಸಿ ಪಟ್ಟಿಯಲ್ಲಿರುವ ಕೆಲವು ಜಾತಿಗಳು ಮತ್ತೊಂದು ರಾಜ್ಯದಲ್ಲಿ ಎಸ್‌ಸಿ ಪಟ್ಟಿಯಲ್ಲಿ ಇಲ್ಲ. ಅಂತಹ ಜಾತಿಯವರು ತಮ್ಮನ್ನು ಎಸ್‌ಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net