ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ನಾಲ್ವರು ಆರೋಪಿಗಳ ವಶ, ಗರ್‌ವಾಲಿ ಪರಾರಿ, ಇಬ್ಬರು ನೊಂದ ಮಹಿಳೆಯರ ರಕ್ಷಣೆ

prostitution
Published on

ವಿಜಯಪುರ: ಬಾಡಿಗೆ ಮನೆಯಲ್ಲಿ ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಪೊಲೀಸರು ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಿದ್ದಾರೆ.

ದಾಳಿ ವೇಳೆ ದಂಧೆ ನಡೆಸುತ್ತಿದ್ದ ‘ಗರ್‌ವಾಲಿ’ ಪರಾರಿಯಾಗಿದ್ದು, ನಾಲ್ವರು ಪುರುಷರನ್ನು ಬಂಧಿಸಲಾಗಿದೆ. ಹೊನಗನಹಳ್ಳಿ ಗ್ರಾಮದ ರವಿ ಜಮಖಂಡಿ (38), ವಿಜಯಪುರ ಹಮಾಲರ ಕಾಲನಿ ನಿವಾಸಿ ಪ್ರಭು ಈರಪ್ಪ ಮನಗೂಳಿ (35), ಬಾರಾಕೊಟ್ರಿ ತಾಂಡಾದ ಸುನೀಲ ಅಲಿಯಾಸ್ ಸೀನು ಚವಾಣ್(26) ಹಾಗೂ ಕೊಲ್ಹಾರದ ನಿವಾಸಿ ಮಲ್ಲಿಕಾರ್ಜುನ ರಾಚಪ್ಪ ಬಿರಾದಾರ (27) ಬಂಧಿತ ಆರೋಪಿಗಳು.

ಇಲ್ಲಿನ ಸಾಯಿಪಾರ್ಕ್‌ನ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ದಂಧೆ ನಡೆಸುತ್ತಿದ್ದ ಪೂಜಾ ಪಾಟೀಲ ಪರಾರಿಯಾಗಿದ್ದಾಳೆ. ಅಂದಾಜು 30-32 ವರ್ಷದ ನೊಂದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಇಬ್ಬರಿಗೂ ಕೆಲಸ ಕೊಡಿಸುವುದಾಗಿ ಹೇಳಿ ಪೂಜಾ ಪಾಟೀಲ ಕರೆತಂದಿದ್ದಳು ಎನ್ನಲಾಗಿದೆ.

ಇಬ್ಬರಿಗೂ ತಲಾ 200 ರಿಂದ 300 ರೂ. ನೀಡುತ್ತಿದ್ದು ಉಳಿದ ಹಣ ಸ್ವಂತಕ್ಕೆ ಇಟ್ಟುಕೊಳ್ಳುತ್ತಿದ್ದಳೆಂದು ನೊಂದ ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ.

ಎಸ್‌ಪಿ ಆನಂದಕುಮಾರ ಮತ್ತು ಎಎಸ್‌ಪಿ ಡಾ.ರಾಮ ಅರಸಿದ್ದಿ ಮಾರ್ಗದರ್ಶನ ಹಾಗೂ ಎಪಿಐ ರಮೇಶ ಅವಜಿ ನೇತೃತ್ವದಲ್ಲಿ ಜಲನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಮಹಿಳಾ ಪಿಎಸ್‌ಐ ಜ್ಯೋತಿ ಖೋತ, ಸಿಬ್ಬಂದಿ ಬಿ.ಎಂ. ಪವಾರ, ಸಂತೋಷ ನಾಯಕ, ಅಡಗಿಮನಿ, ಮಂಕನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net