

ಚಿತ್ರದುರ್ಗ: ಮಹಾಯೋಗಿ ವೇಮನರು ವಚನಗಳ ಮೂಲಕ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿ ದಾರಿಗೆ ತರಲು ಯತ್ನಿಸಿದರು. ಅವರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದರು.
ಜಯಂತಿ ಆಚರಣೆಗಳು ಜಾತಿ ಒಗ್ಗಟ್ಟು, ಬಲ ಪ್ರದರ್ಶನವಲ್ಲ. ಮಹನೀಯರನ್ನು ಯಾವುದೇ ಜಾತಿಗೆ ಸೀಮಿತ ಮಾಡುವುದೂ ಸರಿಯಲ್ಲ. ಅವರೆಲ್ಲರ ಸಂದೇಶ, ಬದುಕು, ವಿಚಾರಧಾರೆ ಇಡೀ ಮಾನವ ಸಂಕುಲಕ್ಕೆ ಸಂಬಂಧಿಸಿವೆ. ವೇಮನರ ವಿಚಾರ ತಿಳಿದುಕೊಳ್ಳುವ ಮೂಲಕ ಮೌಲ್ಯಯುತ ಬದುಕು ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ರೆಡ್ಡಿ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಉತ್ತಮ ಸಮಾಜವಾಗಿದೆ. ಜಯಂತಿ ಕಾರ‌್ಯಕ್ರಮ ಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಹನೀಯರ, ಮಾನವತಾವಾದಿಗಳ ವಿಚಾರಧಾರೆ ತಿಳಿಸಬೇಕು. ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ, ಸಂಸ್ಕಾರ ಅಳಿವಿನಂಚಿನಲ್ಲಿವೆ. ಕುಸಿಯುತ್ತಿರುವ ಮೌಲ್ಯಗಳನ್ನು ಮತ್ತೆ ಕಟ್ಟುವ ಮೂಲಕ ಸಮಾಜವನ್ನು ಉತ್ತಮ ಮಾರ್ಗಕ್ಕೆ ಕೊಂಡ್ಯೊಯಬೇಕಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ ಮಾತನಾಡಿ, ವೇಮನರ ತೆಲುಗಿನ ವಚನಗಳು ಕನ್ನಡ ಸಹಿತ ಬೇರೆ, ಬೇರೆ ಭಾಷೆಗಳಿಗೆ ಭಾಷಾಂತರವಾಗಿವೆ. ಅವರ ವಚನಗಳು ಸಮಾಜಕ್ಕೆ ಮಾರ್ಗದರ್ಶನವಾಗಿವೆ ಎಂದು ಹೇಳಿದರು.
ಚಳ್ಳಕೆರೆ ತಾಲೂಕು ಬೇಡರೆಡ್ಡಿಹಳ್ಳಿ ಜಿ.ವಿ.ಆಂಜನಪ್ಪ ಸ್ಮಾರಕ ಸಂಯುಕ್ತ ಪಪೂ ಕಾಲೇಜು ಪ್ರಾಚಾರ್ಯ ಎಸ್.ಬಿ.ಭೀಮರೆಡ್ಡಿ ಉಪನ್ಯಾಸ ನೀಡಿ, ವೇಮನರ ವಚನಗಳಲ್ಲಿ ಜೀವನಕ್ಕೆ ಅನ್ವಯಿಸುವ, ಉತ್ತಮ ಬದುಕಿಗೆ ಬೇಕಾಗುವ ಜ್ಞಾನ ಪಡೆಯಬಹುದಾಗಿದೆ. ಅವರ ವಚನಗಳನ್ನು ಓದಿ ಅರ್ಥೈಸಿಕೊಂಡರೆ ಜೀವನ ಸಾರ್ಥಕವಾಗಲಿದೆ.
ವೇಮನರು ರೆಡ್ಡಿ ಸಮುದಾಯಕ್ಕೆ ಸೀಮಿತವೆಂಬ ಸಂಕುಚಿತ ಮನೋಭಾವ ಸಲ್ಲದು. ಅವರು ಜಗತ್ತು ಕಂಡ ದಾರ್ಶನಿಕರು. ಅವರನ್ನು ವಿಶಾಲ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕಿದೆ. ಅವರ ವಚನಗಳ ಸಮಾಜಮುಖಿ ಸಂದೇಶಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ ಎಂದರು.
ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ರೆಡ್ಡಿ ಸಮುದಾಯದ ನಿವೃತ್ತ ಅಧಿಕಾರಿಗಳಾದ ವಿಶ್ವನಾಥ ರೆಡ್ಡಿ, ಇಂಟೂರು ಜಯರಾಮ ರೆಡ್ಡಿ, ರಾಮಕೃಷ್ಣರೆಡ್ಡಿ, ಹನುಮಂತರೆಡ್ಡಿ, ವೆಂಕಟೇಶ್‌ರೆಡ್ಡಿ, ಮುಖಂಡರಾದ ವಿಜಯಕಮಾರ್ ಡಿ.ಕೆ.ಹಟ್ಟಿ, ಮಂಜುನಾಥ ಬೆಳಗಟ್ಟ, ವ ಕೀಲ ಬಾಬುರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಮತ್ತಿತರರು ಇದ್ದರು. ಹಿಮಂತ ರಾಜ ತಂಡದವರು ಗೀತಗಾಯನ ನಡೆಸಿಕೊಟ್ಟರು.