ವೇದಿಕೆಯಲ್ಲೇ ಸಚಿವ-ಶಾಸಕ ಜಟಾಪಟಿ, ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹೊಸಕೋಟೆ ತಾಪಂ

mtb
Published on

ಹೊಸಕೋಟೆ: 2018ರಲ್ಲಿ ನಾನು ಶಾಸಕನಾಗಿದ್ದಾಗ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಇಂದು ಅಂಗವಿಕಲರಿಗೆ ವಾಹನ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದ ತಾಪಂ ಆವರಣದಲ್ಲಿ ಶುಕ್ರವಾರ 18 ಅಂಗವಿಕಲರಿಗೆ ನಾಲ್ಕು ಚಕ್ರದ ವಾಹನ ವಿತರಿಸಿ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ವಾಹನಗಳು ಗೋದಾಮಿನಲ್ಲಿಯೇ ಇದ್ದರೂ ವಿತರಿಸದೆ ಈಗ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮೂರು ದಿನಗಳ ಮುಂಚಿತವಾಗಿಯೇ ಶಾಸಕರಿಗೆ ಆಹ್ವಾನ ನೀಡಿದ್ದರೂ ವಿರೋಧ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

40 ವರ್ಷಗಳಿಂದ ಸರ್ವಾಧಿಕಾರಿಯಂತೆ ರಾಜಕೀಯ ಮಾಡುತ್ತಾ ಬಂದಿರುವ ಶಾಸಕರ ಕಡೆಯವರು ನಗರದ ಅಭಿವೃದ್ಧಿಗೆ ಈವರೆಗೆ ಯಾವುದೇ ಹಣ ಬಿಡಗಡೆ ಮಾಡಿಲ್ಲ. ನಗರದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ, ಕಸದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ಅವರ ದಬ್ಬಾಳಿಕೆ ತಾಲೂಕಿನ ಜನತೆಗೆ ತಿಳಿದಿರುವ ವಿಚಾರ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯ ಮಾಡುವಂತೆಯೂ ಸಲಹೆ ನೀಡಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅಂಗವಿಕಲರನ್ನು ಇನ್ನು ಮುಂದೆ ವಿಶೇಷ ಚೇತನರೆಂದು ಸಂಭೋದಿಸಬೇಕು. ಹಾಗೆಯೇ ನಿಜವಾದ ಅಂಗವಿಕಲರು ಸರ್ಕಾರಿ ಅಧಿಕಾರಿಗಳು. ಕಳೆದ ಒಂದೂವರೆ ವರ್ಷದ ಹಿಂದೆಯೇ ಲಾನುಭವಿಗಳಿಗೆ ನೀಡಬೇಕಿದ್ದ ವಾಹನಗಳನ್ನು ನೀಡದೆ ರಾಜಕೀಯ ಒತ್ತಡಗಳಿಂದ ಕಾರ್ಯಕ್ರಮ ಮುಂದೂಡಿ ಬೆನ್ನು ಮೂಳೆ ಮುರಿದವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಕಾರ್ಯಕ್ರಮದ ಹಿಂದಿನ ದಿನ (ಜು.8) ನಮಗೆ ಆಹ್ವಾನ ಪತ್ರಿಕೆ ನೀಡುವ ಮೂಲಕ ನಮಗೆ ಅವಮಾನ ಮಾಡಲಾಗಿತ್ತು. ಅದಕ್ಕಾಗಿ ನಮ್ಮ ಬೆಂಬಲಿಗರು ಪ್ರತಿಭಟನೆ ನಡೆಸಿದರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಜಿಪಂ ಸಿಇಒ ರವಿಕುಮಾರ, ತಾಪಂ ಇಒ ಶ್ರೀನಾಥ್‌ಗೌಡ, ನಗರಸಭಾ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಅಂಗವಿಕಲ ಇಲಾಖಾ ಅಧಿಕಾರಿ ಜಗದೀಶ್, ಜಿಪಂ ಸದಸ್ಯ ಮಂಜುನಾಥ್, ಇತರರು ಹಾಜರಿದ್ದರು.

ಶಾಸಕರ ಬೆಂಬಲಿಗರ ಪ್ರತಿಭಟನೆ: ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪರಿಸ್ಥಿತಿ ಬಿಗಡಾಯಿಸುವ ಸೂಚನೆ ಅರಿತಿದ್ದ ಪೊಲೀಸರು ರಸ್ತೆ ಬಂದ್ ಮಾಡಿದರು. ಬೆಂಬಲಿಗರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಶರತ್ ಬಚ್ಚೇಗೌಡ ಅವರನ್ನು ಪೊಲೀಸರು ತಡೆದರು. ಈ ವೇಳೆ ನೂಕುನುಗ್ಗಲು ಉಂಟಾಯಿತು.

ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು, ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿ ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರಂತೆ ಪೊಲೀಸರು ವರ್ತಿಸುತ್ತಿದ್ದಾರೆ, ಕಾರ್ಯಕ್ರಮಕ್ಕೆ ಶಾಸಕರನ್ನು ತಡವಾಗಿ ಆಹ್ವಾನಿಸಿ ಅಗೌರವ ಸೂಚಿಸುತ್ತಿದ್ದಾರೆ ಎಂದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರು ಬ್ಯಾರಿಕೇಟ್ ಭೇದಿಸಿ ತಾಪಂ ಎದುರಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಪ್ರಾರಂಭಿಸಿದರು. ಅಲ್ಲಿಗೆ ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರೂ ಆಗಮಿಸಿ ಸಚಿವರ ಪರವಾಗಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಸಚಿವರ ಬೆಂಬಲಿಗರು ಪರಸ್ಪರ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ಹತೋಟಿ ತಪ್ಪುವ ಪರಿಸ್ಥಿತಿ ಅರಿತ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಆ ನಂತರ ಸಚಿವ ಎಂಟಿಬಿ ನಾಗರಾಜ್ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪೊಲೀಸರು ಇಬ್ಬರೂ ನಾಯಕರ ಕೆಲವು ಬೆಂಬಲಿಗರನ್ನು ಮಾತ್ರ ಕಾರ್ಯಕ್ರಮದ ಸ್ಥಳಕ್ಕೆ ಕಳುಹಿಸಿ ಉಳಿದವರನ್ನು ಅಲ್ಲಿಯೇ ತಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net