

ಹಾಸನ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರನ್ನು ಈ ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಹೊರಟ ಪಂಜಿನ ಮೆರವಣಿಗೆ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯಿಂದ ಎನ್.ಆರ್. ವೃತ್ತಕ್ಕೆ ಬಂದು ತಲುಪಿತು.
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಡಿ. ಮನುಕುಮಾರ್, ನಮ್ಮ ರಾಜ್ಯಾಧ್ಯಕ್ಷರು ಕಾನೂನಿಗೆ ಭಂಗ ತರುವ ಅಥವಾ ಬೇರೆ ಯಾರಿಗೂ ತೊಂದರೆ ಕೊಡುವ ಕೆಲಸ ಮಾಡಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರು. ಅಂಥವರನ್ನು ಬಂಧಿಸಿ ಜೈಲಿಗೆ ಕಳಿಸಿರುವುದು ಕನ್ನಡ ಹೋರಾಟಗಾರರ ದಮನ ಮಾಡುವ ಧೋರಣೆಯಾಗಿದೆ. ಕೂಡಲೇ ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಕನ್ನಡ ಅಭಿಯಾನ ಶುರು ಮಾಡುವ ವೇಳೆ ಕರವೇ ರಾಜ್ಯಾಧ್ಯಕ್ಷರನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ನಮ್ಮ ಕನ್ನಡ ಭಾಷಿಕರೇ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಬಂದಿದೆ. ಬೇರೆ ರಾಜ್ಯದಿಂದ ವಲಸೆ ಬಂದಿರುವ ಇತರೆ ಭಾಷಿಕರು ಬಂದು ಅವರಿಂದ ಕನ್ನಡಿಗರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದೆ ರೀತಿ ಮುಂದುವರೆದರೆ ಕರ್ನಾಟಕವೇ ನಮ್ಮದು ಎಂದು ಕೇಂದ್ರಾಡಳಿತ ಪ್ರದೇಶ ಮಾಡಲು ಹೇಳಿಕೆ ಕೊಡಲು ಹಿಂಜರಿಯುವುದಿಲ್ಲ. ಇಂತಹ ವೇಳೆ ನಾವು ಹೋರಾಟ ಕೈಗೆತ್ತಿಕೊಂಡಾಗ ಬಂಧಿಸಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಸೀತಾರಾಂ ತನುಗೌಡ, ಅಭಿ, ಪ್ರೀತಂ, ಮಧು, ರಘುಪಾಳ್ಯ, ಚಂದ್ರಶೇಖರ್, ಹೇಮಂತ್ ಕುಮಾರ್, ರೇಖಾ ಮೊದಲಾದವರಿದ್ದರು.
ನಾಳೆ ತೀರ್ಪು
ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಾರಾಯಣಗೌಡ ಸೇರಿ 29 ಜನರನ್ನು ಬಂಧಿಸಲಾಗಿದೆ. ಅದಾದ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕರವೇ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಮಧ್ಯೆ ಮಂಗಳವಾರ ನಾರಾಯಣಗೌಡ ಹಾಗೂ ಇತರರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ತೀರ್ಪು ಕಾಯ್ದಿರಿಸಿದ್ದು, ಜ.6 ರಂದು ಆದೇಶ ಪ್ರಕಟಿಸಲಿದೆ.