

ಚಿತ್ರದುರ್ಗ: ವೇದಿಕೆ ನಡೆ ನಿಸರ್ಗದ ಕಡೆ ಎಂಬ ಘೋಷವಾಕ್ಯದೊಂದಿಗೆ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಬಿ.ಟಿ.ರಾಜೇಂದ್ರ ತಿಳಿಸಿದರು.
ವೇದಿಕೆಯ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರದ ಕೋಟೆ ಪೊಲೀಸ್‌ಠಾಣೆ ಕಚೇರಿ ಆವರಣದಲ್ಲಿ ಗುರುವಾರ ಸಸಿಗಳನ್ನು ನೆಟ್ಟ ನಂತರ ಮಾತನಾಡಿದರು.
ಮನೆಗೊಂದು ಮರ, ಊರಿಗೊಂದು ಕೆರೆ ಅತ್ಯಗತ್ಯ. ಸುಂದರ ಪರಿಸರ ನಿರ್ಮಾಣದಿಂದ ಆರೋಗ್ಯ ವೃದ್ಧಿಯಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಡಾವಣೆ ಸೇರಿ ಹಲವು ಠಾಣೆ, ಕಚೇರಿಗಳ ಆವರಣಗಳಲ್ಲಿ ಈಗಾಗಲೇ ಸಸಿಗಳನ್ನು ನೆಟ್ಟಿದ್ದೇವೆ. ಇನ್ನೂ ವಿವಿಧೆಡೆಗಳಲ್ಲಿ ನೆಡುವುದರ ಜತೆಗೆ ಪೋಷಿಸುವ ಉದ್ದೇಶವಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಕೋಟೆ ಠಾಣೆ ಇನ್ಸ್‌ಪೆಕ್ಟರ್ ನಯೀಮ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಿಡ-ಮರಗಳು ನಾಶವಾಗುತ್ತಿರುವ ಕಾರಣದಿಂದಾಗಿ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಇದರಿಂದ ರೈತಾಪಿ ವರ್ಗ ಸೇರಿದಂತೆ ಸಕಲ ಜೀವರಾಶಿಗಳು ತೊಂದರೆ ಉಂಟಾಗಿದೆ ಎಂದು ಬೇಸರಿಸಿದರು.
ಈ ವೇದಿಕೆ ಒಳಗೊಂಡು ಎಲ್ಲರೂ ಪರಿಸರ ರಕ್ಷಣೆ ಕುರಿತು ವಿಶೇಷ ಕಾಳಜಿವಹಿಸಿ ಗಿಡಗಳನ್ನು ನೆಡಲು ಮುಂದಾದಾಗ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಮುಖಂಡರಾದ ಕುಮಾರಸ್ವಾಮಿ, ಅಭಿಲಾಷ್, ಅಶೋಕ್, ಗಿರೀಶ್, ನಿರಂಜನ್, ನಾಗರಾಜ್, ದಾದು, ವಿನೋದ್ ರಾಜ್, ಕಾರ್ತಿಕ್, ರಂಗಸ್ವಾಮಿ, ರಜಿನಿ, ಅಣ್ಣಪ್ಪ, ಮಧು, ಯತಿರಾಜ್, ರಾಕೇಶ್ ಇತರರಿದ್ದರು.