ವೇದಾವತಿ ನದಿಗೆ ನೀರು ಹರಿಸಲಿ

25 SIRAGUPPA 01
Published on

ಸಿರಗುಪ್ಪ: ಸಂವಿಧಾನ ಬದಲಾಯಿಸುವ ಹೇಳಿಕೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದಲ್ಲಿ ಬಿಜೆಪಿ ಮಂಡಲ ಘಟಕದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ತಾಲೂಕಿನ ವೇದಾವತಿ ನದಿ ದಡದಲ್ಲಿರುವ ರೈತರ ಬೆಳೆಗಳು ನೀರಿಲ್ಲದೆ ಒಣಗುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಕೂಡಲೇ ನದಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಇತ್ತೀಚಿಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವೇದಾವತಿ ನದಿಗೆ 25 ರಿಂದ 30 ಟಿಎಂಸಿ ನೀರು ಹರಿಸಲು ಉಪಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆಂದು ಕ್ಷೇತ್ರದ ಶಾಸಕರು ರೈತರಿಗೆ ಹುಸಿ ಭರವಸೆ ನೀಡಿದ್ದಾರೆ ಎಂದು ದೂರಿದರು.

ದಾಸಪುರ ಎಸ್ಕೇಪ್ ಮಾತ್ರ ನನ್ನ ಕಾರ್ಯ ಕ್ಷೇತ್ರಕ್ಕೆ ಬರುತ್ತದೆ. ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ ಅವರ ಕಾರ್ಯಕ್ಷೇತ್ರಕ್ಕೆ ಗುಡೂದೂರು ಎಸ್ಕೇಪ್ ಬರುತ್ತದೆ. ಸಿರಗುಪ್ಪ ಶಾಸಕರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇದರಿಂದ ಯಾವ ಪ್ರಯೋಜನವೂ ಇಲ್ಲ. ವೇದಾವತಿ ನದಿ ತೀರದಲ್ಲಿ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿನ ಬೆಳೆ ನಾಶವಾಗುತ್ತಿದ್ದು. ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಹುಸಿ ಭರವಸೆ ನೀಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಸುಳ್ಳಿನ ಭರವಸೆಗಳನ್ನು ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕಾರ್ಯವನ್ನು ಬಿಟ್ಟು. ತಕ್ಷಣ ರೈತರ ಗೋಳನ್ನು ಆಲಿಸಿ ಎರಡು ಟಿಎಂಸಿ ನೀರನ್ನು ಹರಿಸಿದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಜೋಳ ಖರೀದಿ ಕೇಂದ್ರದಲ್ಲಿನ ನ್ಯೂನತೆಗಳನ್ನು ಗುರುತಿಸಿ ಸರಿಪಡಿಸುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಶಾಸಕರು ಖುದ್ದು ಪರಿಶೀಲನೆ ಕೈಗೊಳ್ಳಬೇಕೆಂದು ಎಂ.ಎಸ್.ಸೋಮಲಿಂಗಪ್ಪ ಆಗ್ರಹಿಸಿದರು.

ಯುವ ಮೋರ್ಚಾ ಅಧ್ಯಕ್ಷ ಶೇಖರ್ ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಳಗಲ್ ಬಸವರಾಜ್, ಪ್ರಮುಖರಾದ ವೀರನಗೌಡ, ನಾಗೇಶಪ್ಪ, ಸೋಮಯ್ಯ, ಹನುಮಂತ, ಅಶೋಕ, ಮಹಾದೇವ, ಮೋಹನ್ ರೆಡ್ಡಿ, ವೈ.ಡಿ.ವೆಂಕಟೇಶ, ಗಂಗಪ್ಪ, ಶ್ರೀಶೈಲ, ಮಾದಣ್ಣ, ರೈತರು, ಪ್ರಮುಖರು ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net