ವೇದಾಂತ ಗಣಿ ಕಂಪನಿ ವಿರುದ್ಧ ಪ್ರತಿಭಟನೆ

CTD STRIKE---------------
Published on

ಚಿತ್ರದುರ್ಗ: ಹೊರ ರಾಜ್ಯದವರಿಗೆ ಕೆಲಸ ಕೊಟ್ಟು ಸ್ಥಳೀಯರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ವೇದಾಂತ ಗಣಿ ಕಂಪನಿ ವಿರುದ್ಧ ವಿವಿಧ ಸಂಘಟನೆಗಳ ಕಾರ್ಯಕರ್ತರು ಚಿತ್ರದುರ್ಗ ತಾಲೂಕು ಭೀಮಸಮುದ್ರ ದಿಂಡದಹಳ್ಳಿ ಬಳಿ ಭಾನುವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ಸ್ಥಳೀಯರಿಗೆ ಉದ್ಯೋಗ ಕೊಡದೆ ಹೊರ ರಾಜ್ಯದವರಿಗೆ ಕೆಲಸ ಕೊಡಲಾಗುತ್ತಿದೆ. ಇದಲ್ಲದೆ ಹಿಂದಿನ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅವರು 2013ರಲ್ಲಿ ವೇದಾಂತ ಮೈನ್ಸ್, ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಶೇ.40:60 ಅನುಪಾತದಡಿ ಅದಿರು ಸಾಗಿಸಲು ಆದೇಶಿಸಿದ್ದರು. ಆದರೆ ವೇದಾಂತ ಗಣಿ ಕಂಪನಿ ಆದೇಶ ಉಲ್ಲಂಘಿಸಿ ಅದಿರನ್ನು ಸಂಪೂರ್ಣವಾಗಿ ರೈಲಿನಲ್ಲಿ ಸಾಗಿಸುತ್ತಿದೆ. ಇದರಿಂದ ಎರಡು ಸಾವಿರಕ್ಕೂ ಹೆಚ್ಚು ಲಾರಿ ಮಾಲೀಕರು, ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸಾಲ ಮಾಡಿ ಲಾರಿ ಖರೀದಿಸಿದವರು ಮಾಸಿಕ ಕಂತು ಕಟ್ಟಲಾಗದೆ ಆತ್ಮಹತ್ಯೆ ದಾರಿ ತುಳಿಯುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಭೀಮಸಮುದ್ರದ ಸಿರಾಜ್ ಮಾತನಾಡಿ, ಲಾರಿಗಳಲ್ಲೂ ಅದಿರು ಸಾಗಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವೇದಾಂತ ಕಂಪನಿ ಜತೆ ಕೈ ಜೋಡಿಸಿದ್ದಾರೆ. ಅರಣ್ಯ ಒತ್ತುವರಿಯೊಂದಿಗೆ 25 ಸಾವಿರ ಟನ್ ಅದಿರು ಸಾಗಾಣಿಕೆಯಾಗುತ್ತಿದ್ದು, ದಿನಕ್ಕೆ ನೂರು ಕೋಟಿ ರೂ.ಗಿಂತಲು ಅಧಿಕ ವಹಿವಾಟು ನಡೆಯುತ್ತಿದೆ ಎಂದು ಆಪಾದಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ರಮೇಶ್ ಮಾತನಾಡಿ, ಗಣಿಗಾರಿಕೆಗೆ ಪರ್ಯಾಯವಾಗಿ ಸಸಿಗಳನ್ನು ನೆಟ್ಟು ಪೋಷಿಸದೆ ಕಂಪನಿ ನಿಯಮಗಳನ್ನು ಗಾಳಿಗೆ ತೂರಿದೆ. ಲಾರಿಗಳ ಮೂಲಕ ಅದಿರು ಸಾಗಾಟಕ್ಕೆ ಅವಕಾಶ ಕೊಡುವತನಕ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ. ಮಂಜುನಾಥ್, ಚಿತ್ರದುರ್ಗ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಇಮ್ರಾನ್, ಹನೀಸ್, ಸೈಯದ್ ಖುದ್ದೂಸ್, ಶಿವರಾಜ್, ವಿಜಯಕುಮಾರ್, ನಾಗರಾಜ್, ವಸೀಂ, ಪ್ರಕಾಶ್ ರಾಮನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net