ವೇದ, ಸಂಗೀತದ ಬಗ್ಗೆ ಜ್ಞಾನ ಹೊಂದಿದ್ದ ಸವಿತಾಮಹರ್ಷೀ

Published on

ಚಾಮರಾಜನಗರ : ಸವಿತಾ ಮಹರ್ಷಿ ಅವರು ಹುಟ್ಟಿದಾಗಿನಿಂದಲೇ ವೇದ ಮತ್ತು ಸಂಗೀತದ ಬಗ್ಗೆ ಜ್ಞಾನವೊಂದಿದ್ದರು ಎಂದು ಜಿಲ್ಲಾಧಿಕಾರಿ ಗೀತಾ ಹುಡೇದ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಲ್ಕು ವೇದಗಳಲ್ಲಿ ಸಾಮವೇದ ಒಂದಾಗಿದ್ದು, ಸಾಮವೇದ ಎಂದರೆ ಸಂಗೀತ. ಸವಿತಾ ಮಹರ್ಷಿ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ವೇದವನ್ನು ರಚಿಸಿದ್ದರು. ಸವಿತಾ ಮಹರ್ಷಿಯವರು ವೈದ್ಯಕೀಯ ವೃತ್ತಿಯನ್ನು ಮಾಡುತ್ತಿದ್ದರು. ಅಂದಿನ ಕಾಲಘಟದಲ್ಲಿ ನಯನ ಕ್ಷತ್ರಿಯ ಸಮಾಜ, ಸವಿತಾ ಸಮಾಜ ದವರು ವೈದ್ಯಕೀಯ ವೃತ್ತಿ ಮಾಡುತ್ತಿದ್ದರು ಎಂಬ ಪ್ರತೀತಿಯಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ವೃತ್ತಿ ಇರುತ್ತದೆ. ವೃತ್ತಿಯಲ್ಲಿ ಮೇಲು ಕೇಳು ಎಂಬುದಿಲ್ಲ. ವೃತ್ತಿಯನ್ನು ನಾವೆಲ್ಲರೂ ಗೌರವಿಸಬೇಕು ಎಂದು ಹೇಳಿದರು.

ಸವಿತಾ ಸಮಾಜದವರು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಹಿಂದುಳಿದಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳುವ ಹಾಗೇ ಶಿಕ್ಷಣವೇ ಇದಕ್ಕೆಲ್ಲ ಪರಿಹಾರವಾಗಿದೆ. ಆಗಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು. ಈ ಮೂಲಕ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಅಧೀಕ್ಷಕ ಲಕ್ಷ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್ ಹಾಗೂ ಸವಿತಾ ಸಮಾಜದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net