

ಬೆಳಗಾವಿ: ರಾಷ್ಟ್ರೀಯ ವೃತ್ತಿ ಪರಿಷತ್‌ನಲ್ಲಿ ಸಂಯೋಜನೆ ಪಡೆದು, 7 ವರ್ಷ ಪೂರೈಸಿದ ಖಾಸಗಿ ಐಟಿಐಗಳ ಸಿಬ್ಬಂದಿಗೆ 1997ರ ಅನುದಾನ ಸಂಹಿತೆ ಪ್ರಕಾರ ವೇತನಾನುದಾನ ಮಂಜೂರು ಮಾಡುವಂತೆ ಒತ್ತಾಯಿಸಿ ರಾಜ್ಯ ಖಾಸಗಿ ಐಟಿಐ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 10 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಪ್ರತಿ ಅಧಿವೇಶನ ಸಂದರ್ಭದಲ್ಲೂ ಸತ್ಯಾಗ್ರಹ ಮಾಡಿದರೂ ಪ್ರಯೋಜನವಾಗಿಲ್ಲ. ಇದೇ ಮಾರ್ಚ್ 1ರಂದು ಹುಬ್ಬಳ್ಳಿಯಿಂದ ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ವರೆಗೂ ಪಾದಯಾತ್ರೆ ಕೈಗೊಂಡಿದ್ದೇವು. ಮುಖ್ಯಮಂತ್ರಿ, ಸಚಿವರೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಬಳಿಕ ಮಾ.15ರಂದು ಮತ್ತೊಮ್ಮೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಕಡತ ತರಿಸಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ನಾವು 7 ದಿನ ಗಡವು ನೀಡಿ ಧರಣಿ ಕೈಬಿಟ್ಟಿದ್ದೇವೆ. ಸರ್ಕಾರ ಈ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಅಡಿವೇಶ ಇಟಗಿ, ಲೋಹಿತ ಕಂಬಾರ, ಉತ್ತಮ ಖಾತೇದಾರ, ವಜೀಬ್ ಮುಲ್ಲಾ ಇತರರು ಇದ್ದರು.