ವೇತನವಿಲ್ಲದ ದುಡಿಮೆಗೆ ಗ್ಯಾರಂಟಿಯೇ ಸಂಬಳ

15Rajesh4
Published on

ಚಾಮರಾಜನಗರ: ಗ್ಯಾರಂಟಿ ಯೋಜನೆ ಕೇವಲ ರಾಜಕೀಯ ಕಾರ್ಯಕ್ರಮವಲ್ಲ. ಗಂಭೀರವಾದ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮವೂ ಆಗಿದೆ. ಮುಖ್ಯವಾಗಿ ವೇತನ ಇಲ್ಲದ ದುಡಿಮೆ ಮಾಡುತ್ತಿರುವ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಮೂಲಕ ಸರ್ಕಾರ ಸಂಬಳ ನೀಡುತ್ತಿದೆ ಎಂದು ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಡಾ.ಎಚ್.ವಿ.ವಾಸು ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಅಂಕಿ-ಅಂಶಗಳ ಪ್ರಾತ್ಯಕ್ಷಿಕೆ ಮೂಲಕ ವಿಚಾರ ಮಂಡಿಸಿದರು.

ಗ್ಯಾರಂಟಿ ಯೋಜನೆ ಕೇವಲ ಮತ ಗಳಿಸಲು ತಂದ ಯೋಜನೆಯಲ್ಲ. ನಮಗಾಗಿ ನಮ್ಮ ಮನೆಗೆಲಸ ಮಾಡುವ ಮಹಿಳೆಯರಿಗೆ ಎರಡು ಹೊತ್ತಿನ ಊಟ ಹಾಕುತ್ತಿದ್ದೇವೆ. ಅವರು ನಮಗಾಗಿ ವೇತನ ಇಲ್ಲದೆ ದುಡಿಯುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಮೂಲಕ ಸರ್ಕಾರ ದುಡಿಮೆ ಮಾಡುತ್ತಿರುವ ಮಹಿಳೆಯರಿಗೆ ಸಂಬಳ ನೀಡುತ್ತಿದೆ ಎಂದರು.

ಗ್ಯಾರಂಟಿ ಬಗ್ಗೆ ಪ್ರಾರಂಭದಿಂದಲೂ ವಿರೋಧ ಮಾಡುತ್ತಿರುವವರು ಮತ್ತು ಫಲಾನುಭವಿಗಳಿಗೂ ಯೋಜನೆಯ ಸಂಪೂರ್ಣ ಮಹತ್ವ ತಿಳಿಯುತ್ತಿಲ್ಲ. ಸರ್ಕಾರದ ಭಾಗವಾಗಿರುವವರೂ ಯೋಜನೆ ಕುರಿತು ಋಣಾತ್ಮಕವಾಗಿ ಮಾತನಾಡುತ್ತಾರೆ. ಮೊನ್ನೆ ಮದ್ದೂರಿನಲ್ಲಿ ಮಾಜಿ ಸಂಸದೆಯೊಬ್ಬರು ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಕೊಟ್ಟಿರೋದಕ್ಕೆ ಮದ್ದೂರಿನಲ್ಲಿ ಗಲಾಟೆ ನಡೆಯುತ್ತಿದೆ ಎಂದಿದ್ದಾರೆ. ಯೋಜನೆಯನ್ನು ಲೇವಡಿ, ವ್ಯಂಗ್ಯ, ಬಿಟ್ಟಿ ಭಾಗ್ಯ ಎನ್ನುವವರು ರಾಜ್ಯದ ಪರಂಪರೆಗೆ ಅವಮಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಯಿಂದ ಆರ್ಥಿಕತೆ ವೃದ್ಧಿಯಾಗುತ್ತದೆ. ಗೃಹಲಕ್ಷ್ಮಿಯ ನಗದು ಉಳಿತಾಯಕ್ಕಿಂತ ಶೇ. 90ರಷ್ಟು ಖರ್ಚಾಗುತ್ತಿದೆ. ಇದರಿಂದ ವ್ಯಾಪಾರ-ವಹಿವಾಟು ಹೆಚ್ಚಾಗುತ್ತಿದೆ. ಉತ್ಪಾದನೆ ಹೆಚ್ಚಳ ಮಾಡಲು ಉದ್ಯೋಗ ಸೃಷ್ಟಿಯಾಗುತ್ತಿದೆ. ಒಂದು ಕುಟುಂಬಕ್ಕೆ ಉದ್ಯೋಗ ಇದ್ದರೂ ಸರ್ಕಾರ ಯಾವುದಾದರೂ ರೀತಿಯಲ್ಲಿ ಹಣ ತಲುಪಿಸುವುದು ಅಭಿವೃದ್ಧಿ ಅರ್ಥಶಾಸ್ತ್ರ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ ಎಂದು ತಿಳಿಸಿದರು. ಗ್ರಾಮೀಣ ಆರ್ಥಿಕತೆಗೆ ಚೈತನ್ಯ ಬಂದಿರುವುದರಿಂದ ಜಿಡಿಪಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ಹೆಚ್ಚಳವಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ತೆರಿಗೆ ಹೆಚ್ಚಳವಾಗಿದೆ ಎಂದು ಹೇಳಿದರು.

ಸರ್ಕಾರಿ ನೌಕರರಿಗೆ ಸಂಬಳ ನಿಂತಾಗ ರಾಜ್ಯ ದಿವಾಳಿಯಾಗಿದೆ ಎನ್ನಬಹುದು. ಆದರೆ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಾಗಿದೆ. ಹಾಗಿದ್ದ ಮೇಲೆ ಗ್ಯಾರಂಟಿ ಯೋಜನೆಯಿಂದ ರಾಜ್ಯ ಹೇಗೆ ದಿವಾಳಿಯಾಯಿತು?. ಇನ್ನು ಯೋಜನೆಯಿಂದ ಜನ ಸೋಮಾರಿಗಳಾಗ್ತಾರಾ ಎನ್ನುವುದಕ್ಕೆ ಏನು ಆಧಾರ? ದೇಶದಲ್ಲಿ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಈ ಯೋಜನೆ ಜಾರಿಗೆ ಬಂತು. ಇಲ್ಲಿನ ಶೇ.100ರಷ್ಟು ಮಹಿಳೆಯರಲ್ಲಿ ಶೇ.38 ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾರೆ. ಕೈಗೆ ದುಡ್ಡು ಸಿಕ್ಕಿದರೆ ಮತ್ತಷ್ಟು ಮೇಲೇರಬೇಕೆಂಬ ಕನಸು ಬೀಳುತ್ತದೆಯೇ ಹೊರತು ಯಾರೂ ಸಹ ಸೋಮಾರಿಗಳಾಗಲ್ಲ ಎಂದರು.

ಕಾರ್ಯಾಗಾರದಲ್ಲಿ ಕಲಾವಿದರಾದ ಕಲೆ ನಟರಾಜು ರಾಗ ಸಂಯೋಜನೆ ಮತ್ತು ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಗಾಯನದ ಗ್ಯಾರಂಟಿ ಗೀತೆ ಕಿರು ಚಿತ್ರ ಪ್ರದರ್ಶನ ಮಾಡಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ವಿಧಾನ ಪರಿಷತ್ತಿನ ಸದಸ್ಯ ಮತ್ತು ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳೀಗೌಡ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮತ್ತು ಜಿಲ್ಲಾ ಮತ್ತು ತಾಲೂಕುಮಟ್ಟದ ಪದಾಧಿಕಾರಿಗಳು ಇದ್ದರು.

ಜನರ ಬದುಕು ಕಟ್ಟುವ ಕೆಲಸ: ಪ್ರಾರಂಭದಲ್ಲಿ ಗ್ಯಾರಂಟಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರೋಧಿಸಿದ್ದರು. ಕರ್ನಾಟಕ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ ಅವರು ಅಧಿಕಾರದಲ್ಲಿರುವ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು. ಕಾಂಗ್ರೆಸ್ ಜನರ ಬದುಕು ಕಟ್ಟುವ ಕೆಲಸ ಮಾಡುತ್ತಿದೆ. ಬಿಜೆಪಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಗಣೇಶ ಮೂರ್ತಿ ವಿಸರ್ಜನೆ ವಿಚಾರದಲ್ಲಿ ಕಾಂಗ್ರೆಸ್ ಶಾಂತಿಗಾಗಿ ಕೆಲಸ ಮಾಡಿದರೆ ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಪ್ರಚಾರಕ್ಕಾಗಿ ಈ ಯೋಜನೆ ನಡೆಯುತ್ತಿಲ್ಲ. ಮಹಿಳೆಯರನ್ನು ಆರ್ಥಿಕವಾಗಿ ಸದೃಢವಾಗಿಸಲು ಕಾರ್ಯಕ್ರಮ ನಡೆಯುತ್ತಿದೆ. ಎಚ್.ವಿ.ಚಂದ್ರು ಜಿಲ್ಲಾಧ್ಯಕ್ಷ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net