ವೇತನ ಹೆಚ್ಚಿಸುವಂತೆ ಸರ್ಕಾರಕ್ಕೆ ಆಗ್ರಹ

Protest
Published on

ಚಿತ್ರದುರ್ಗ: ವೇತನ ಹೆಚ್ಚಳ, ಹಣಕಾಸು ಇಲಾಖೆ ಒಪ್ಪಿಕೊಂಡಂತೆ ನಿವೃತ್ತರಿಗೆ ಇಡಿಗಂಟು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಜಿಲ್ಲಾ ಸಂಘ, ಸಿಐಟಿಯು ಕಾರ್ಯಕರ್ತರು ಗುರುವಾರ ಜಿಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ, ಪಿಎಂಗೆ ಒತ್ತಾಯಿಸಿ ಮನವಿ ಪತ್ರ ರವಾನಿಸಿದರು.

ಕೇಂದ್ರ ಸರ್ಕಾರ ಗೌರವಧನ 26ಸಾವಿರ ರೂ.ಗೆ ಹೆಚ್ಚಿಸಬೇಕು. ಅಲ್ಲಿಯವರೆಗೂ ಕೇರಳ, ಪಾಂಡಿಚೆರಿ, ತಮಿಳುನಾಡು, ಹರಿಯಾಣ ರಾಜ್ಯಗಳಲ್ಲಿ ಜಾರಿಯಲ್ಲಿರುವ 7 ಸಾವಿರ ರೂ.ನಿಂದ 12 ಸಾವಿರ ರೂ. ವೇತನ ನೀಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾಯಿಸಿರುವುದನ್ನು ಹಿಂಪಡೆದು ಮೊದಲಿನಂತೆ ಬದಲಾಯಿಸಬೇಕು ಎಂದು ಆಗ್ರಹಿಸಿದರು.

ಸುಸಜ್ಜಿತವಿಲ್ಲದ ಕಡೆ ಉತ್ತಮ ಅಡುಗೆ ಕೇಂದ್ರ ನಿರ್ಮಿಸಬೇಕು. ಉತ್ತರಪ್ರದೇಶ, ಪಂಜಾಬ್ ರಾಜ್ಯದ ಹೈಕೋರ್ಟ್ ತೀರ್ಪಿನಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಟ ವೇತನ ಜಾರಿಯಾಗಬೇಕು. ಎಂಡಿಎಂ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು. ಕ್ಲಸ್ಟರ್ ಸಭೆಗಳನ್ನು ಕಡ್ಡಾಯವಾಗಿ ಪ್ರತಿ ಜಿಲ್ಲೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಕೆಲಸದ ಅವಧಿಯನ್ನು 4ರಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಿಸಬೇಕು. ಯೋಜನೆ ಸಂಪೂರ್ಣ ಶಿಕ್ಷಣ ಇಲಾಖೆಯಡಿಯಲ್ಲೇ ನಡೆಯಬೇಕು. ಕಾರ್ಯನಿರ್ವಹಿಸುವ ಸ್ಥಳದಲ್ಲಿ ಮೃತಪಟ್ಟಲ್ಲಿ, 25 ಲಕ್ಷ ರೂ. ಪರಿಹಾರ ನೀಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರತಿ ಶಾಲೆಗೂ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿ ನೇಮಿಸಬೇಕು. ನಿವೃತ್ತಿ ಹೊಂದಿದ ಸಿಬ್ಬಂದಿ ಕುಟುಂಬಸ್ಥರಿಗೆ ಈ ಉದ್ಯೋಗ ನೀಡಬೇಕು. 2023ರ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ 6ಸಾವಿರ ರೂ. ಗೌರವಧನ ಕೂಡಲೇ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಡಿ.ಎಂ.ಮಲಿಯಪ್ಪ, ಪದಾಧಿಕಾರಿಗಳಾದ ಎನ್.ನಿಂಗಮ್ಮ, ಟಿ.ರಾಜಮ್ಮ, ಮಂಜಮ್ಮ, ಶಿವಮ್ಮ, ಗೌರಮ್ಮ, ಟಿ.ಗೌರಮ್ಮ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net