

ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿ ನೌಕರರಿಗೆ ಬಾಕಿ ಇರುವ ವೇತನ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂ ನೌಕರರ ಜಿಲ್ಲಾ ಸಂಘ ಜಿಲ್ಲಾಡಳಿತ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿತು.
ಸರ್ಕಾರ ಗ್ರಾಪಂ ನೌಕರರಿಗೆ ಸಮರ್ಪಕ ವೇತನ ಮತ್ತು ಅಗತ್ಯ ಸೌಲಭ್ಯ ವಿತರಿಸುತ್ತಿಲ್ಲ, ಬೇಡಿಕೆ ಈಡೇರಿಕೆಯ ನಿರಂತರ ಹೋರಾಟಗಳನ್ನು ಕಡೆಗಣಿಸುತ್ತಿದೆ ಎಂದು ಜಿಲ್ಲಾ ಗೌರವಾಧ್ಯಕ್ಷ ಜಿ.ಸಿದ್ದಗಂಗಪ್ಪ ಆರೋಪಿಸಿದರು.
ನೌಕರರಿಗೆ ನಿಯಮಾನುಸಾರ ಕಾಲ ಕಾಲಕ್ಕೆ ತುಟ್ಟಿ ಭತ್ಯೆ ನೀಡಬೇಕು. ಸಿಬ್ಬಂದಿ ವೇತನಕ್ಕೆ 14, 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಶೇ.10ರಷ್ಟು ಮತ್ತು ಕರ ವಸೂಲಿಯ ಶೇ.40 ರಷ್ಟು ಹಣ ಮೀಸಲಿರಿಸಬೇಕು. ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರರು ಮತ್ತು ಗುಮಾಸ್ತರಿಗೆ ಗ್ರೇಡ್ 2 ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಗ್ರೇಡ್ 2 ಕಾರ್ಯದರ್ಶಿಗಳಿಗೆ ಗ್ರೇಡ್ 1 ಕಾರ್ಯದರ್ಶಿಯಾಗಿ ಬಡ್ತಿ ನೀಡಬೇಕು. ಗ್ರೇಡ್ 1 ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಪಂ ಸಿಇಒ ಬಿ ಫೌಜೀಯಾ ತರನ್ನುಮ್, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡ್ತಿಗೆ ಕ್ರಮ ಕೈಗೊಳ್ಳಲು ವಿಳಂಬವಾಗಿದೆ, ಇದೀಗ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ಸರ್ಕಾರದ ಗಮನ ಸೆಳೆದು ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದರು.
ಜಿಲ್ಲಾ ಸಂಘದ ಅಧ್ಯಕ್ಷ ಎನ್.ನಾಗರಾಜ್, ಕಾರ್ಯಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಉಪಾಧ್ಯಕ್ಷ ಆಂಜನೇಯರೆಡ್ಡಿ, ತಾಲೂಕು ಅಧ್ಯಕ್ಷರಾದ ಶಶಿಕುಮಾರ್, ಕೆ.ಎನ್.ನಾರಾಯಣಸ್ವಾಮಿ, ಸುದರ್ಶನ್, ಕೃಷ್ಣಪ್ಪ, ಎನ್.ಗೋವಿಂದರೆಡ್ಡಿ, ಉಪಾಧ್ಯಕ್ಷ ಎ.ರಾಮಾಂಜಿನಪ್ಪ ಇತರರಿದ್ದರು.