

ಧಾರವಾಡ: ಜಲ ಮಂಡಳಿ ಹಂಗಾಮಿ ನೌಕರರ ವೇತನ ಬಿಡುಗಡೆ, ಮರು ನೇಮಕಕ್ಕೆ ಆಗ್ರಹಿಸಿ ಒಂದು ವಾರದಿಂದ ನಗರದ ಪಾಲಿಕೆ ಕಚೇರಿ ಆವರಣದಲ್ಲಿ ಜನಜಾಗೃತಿ ಸಂಘದಿಂದ ಆರಂಭಿಸಿರುವ ಆಮರಣ ಉಪವಾಸ ಸತ್ಯಾಗ್ರಹ ದಿನೇ ದಿನೇ ಕಾವೇರುತ್ತಿದ್ದು, ಗ್ರಾಮ ಪಂಚಾಯಿತಿಗಳೂ ಕೈ ಜೋಡಿಸಿವೆ.
358 ಹಂಗಾಮಿ ನೌಕರರಲ್ಲಿ ಅಮ್ಮಿನಭಾವಿ ಜಲ ಶುದ್ಧೀಕರಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮ್ಮಿನಭಾವಿ, ಮರೇವಾಡ ಹಾಗೂ ಸುತ್ತಲಿನ ಪ್ರದೇಶದ ನೌಕರರೂ ಸೇರಿದ್ದಾರೆ. ಇದೇ ಕಾರಣಕ್ಕೆ ಅಮ್ಮಿನಭಾವಿ, ಮರೇವಾಡ ಗ್ರಾಪಂ ಸದಸ್ಯರು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ.
ಇತ್ತೀಚಗೆ ನಡೆದ ಮರೇವಾಡ, ಅಮ್ಮಿನಭಾವಿ ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಎಲ್ಲ 358 ಹಂಗಾಮಿ ನೌಕರರ 8 ತಿಂಗಳ ವೇತನ ಶೀಘ್ರ ಬಿಡುಗಡೆ ಹಾಗೂ ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಠರಾವು ಪಾಸ್ ಮಾಡಿ ಪಾಲಿಕೆ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ.
4 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಆಸ್ಪತ್ರೆ ಸೇರಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಉಪಾಧ್ಯಕ್ಷ ನಾಗರಾಜ ಕಿರಣಗಿ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮತ್ತೆ ಪಾಲಿಕೆ ಆವರಣದಲ್ಲೇ ಭಾನುವಾರದಿಂದ ಸತ್ಯಾಗ್ರಹ ಆರಂಭಿಸಿದ್ದು, ಬೇಡಿಕೆ ಈಡೇರಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ. ಸ್ಥಳದಲ್ಲೇ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ನೌಕರರಿಗೆ ನ್ಯಾಯ ಸಿಗಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.
ಸತತ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದೇ ಕಾರಣಕ್ಕೆ ದಿನಕ್ಕೊಂದು ಅಭಿಯಾನ ನಡೆಸುತ್ತಿರುವ ಹೋರಾಟಗಾರರು, ಸೋಮವಾರ ಖಾಲಿ ಕೊಡ ಅಭಿಯಾನ ನಡೆಸಲು ತೀರ್ಮಾನಿಸಿದ್ದಾರೆ. ಈ ಹೋರಾಟಕ್ಕೆ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಸೇರಿದಂತೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಪಾಲ್ಗೊಳ್ಳಲಿದ್ದಾರೆ.