ವೇತನ ಬಿಡುಗಡೆಗೆ ನೀರುಗಂಟಿ ಕಾರ್ಮಿಕರ ಆಗ್ರಹ

Published on

ಮೈಸೂರು: ನೀರುಗಂಟಿ ಕಾರ್ಮಿಕರಿಗೆ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಇಂಡಸ್ಟ್ರಿಯಲ್ ವರ್ಕರ್ಸ್ ಜನರಲ್ ಯೂನಿಯನ್‌ನಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಮಿಕರು, ಕಾವೇರಿ ನೀರಾವರಿ ನಿಗಮದ ಅಡಿಯಲ್ಲಿ ನೀರುಗಂಟಿ ಮತ್ತು ಇತರ ಕಾರ್ಮಿಕರು 30 ವರ್ಷಗಳಿಂದ ದುಡಿಯುತ್ತಿದ್ದಾರೆ. ಮೂರು ತಿಂಗಳಿನಿಂದ ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿಯನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇಎಸ್‌ಐ, ಪಿಎಫ್ ಹಣವನ್ನೂ ಪಾವತಿ ಮಾಡಿಲ್ಲ. ಗುತ್ತಿಗೆದಾರರು ಈ ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಇಲಾಖೆ ಅಧಿಕಾರಿಗಳು ಮಾತನಾಡುತ್ತಿಲ್ಲ. ಇದರಿಂದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆ. ಈ ಕೂಡಲೇ ಸಂಬಂಧಪಟ್ಟವರು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎನ್.ಕೆ.ದೇವದಾಸ್, ಮುಖಂಡರಾದ ಸೋಮರಾಜೇ ಅರಸ್, ಶಿವಣ್ಣ, ಕೃಷ್ಣ, ಕುಮಾರ್, ಶ್ರೀನಿವಾಸ್, ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net