ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Bisiyuta
Published on

ಚಿತ್ರದುರ್ಗ: ಬಿಸಿಯೂಟ ತಯಾರಕರಿಗೆ ಏಪ್ರಿಲ್, ಮೇ ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಎಐಟಿಯುಸಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ, ಕನಿಷ್ಟ ವೇತನ ನೀಡದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಬಿಸಿಯೂಟ ತಯಾರಕರಿಗೆ 3,600 ರೂ. ವೇತನ ನೀಡುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಈ ಹಿಂದೆ ಧರಣಿ ಕೈಗೊಂಡು ಸರ್ಕಾರಕ್ಕೆ ಆಗ್ರಹಿಸಿ 4 ತಿಂಗಳು ಕಳೆದರೂ ಕನಿಷ್ಟ ವೇತನ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಹಾಜರಾತಿ ಕಡಿಮೆ ಎಂಬುದಾಗಿ ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆಯುವ ಬದಲು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಬಗೆಹರಿಸಬೇಕು. ನಿವೃತ್ತಿ ನಂತರ 2 ಲಕ್ಷ ರೂ. ಇಡಿಗಂಟು ನೀಡಬೇಕು. ಕರ್ತವ್ಯ ವೇಳೆ ಮೃತಪಟ್ಟಲ್ಲಿ 10 ಲಕ್ಷ ರೂ. ಪರಿಹಾರಕ್ಕೆ ಆದೇಶ ಹೊರಡಿಸಬೇಕು. ಇಎಸ್‌ಐ, ಪಿಎಫ್ ಜಾರಿಗೊಳಿಸಬೇಕು ಎಂದು ಕೋರಿದರು.

ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಪದಾಧಿಕಾರಿಗಳಾದ ಟಿ.ಆರ್.ಉಮಾಪತಿ, ಕೆ.ಇ.ಸತ್ಯಕೀರ್ತಿ, ಸುವರ್ಣಮ್ಮ, ದೊಡ್ಡುಳ್ಳಾರ್ತಿ ಕರಿಯಣ್ಣ, ಪರ್ವಿನ್ ಬಾನು, ಮಂಗಳಮ್ಮ, ಶಾಂತಮ್ಮ, ಗಿರಿಜಮ್ಮ, ತಿಪ್ಪಮ್ಮ, ಓಬಕ್ಕ ಸೇರಿ ನೂರಾರು ಬಿಸಿಯೂಟ ತಯಾರಕರು, ಸಹಾಯಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net