

ದಾಂಡೇಲಿ: ವನ್ಯಜೀವಿ ವಿಭಾಗಕ್ಕೆ ಒಳಪಡುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುತ್ತಿಗೆ ನೌಕರರಿಗೆ ವೇತನ ಪಾವತಿಸುವಂತೆ ಆಗ್ರಹಿಸಿ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ವತಿಯಿಂದ ಶುಕ್ರವಾರ ನಗರದ ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ಅಧ್ಯಕ್ಷ ಹರೀಶ ನಾಯ್ಕ ಮಾತನಾಡಿ, ಸರ್ಕಾರ ವೇತನ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಗುತ್ತಿಗೆ ನೌಕರರ ವೇತನ ಬಿಡುಗಡೆಯಲ್ಲಿ ಗುತ್ತಿಗೆದಾರ ಪಿಎಫ್/ ಇಎಸ್ಐ ಹಣ ಭರಣೆ ಮಾಡದೆ ನಿಷ್ಕಾಳಜಿ ವಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿದ ಮಾತನಾಡಿದ ಎಸಿಎಫ್ ಕೆ.ಸಿ ಗೊರವಾರ್, ಸರ್ಕಾರದಿಂದ ವೇತನ ಬಿಡುಗಡೆಯ ಆದೇಶ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಬಾಕಿ ಉಳಿದಿರುವ ವೇತನ ಬಿಡುಗಡೆ ಮಾಡಲಾಗುವುದು. ಗುತ್ತಿಗೆದಾರರ ಕಾರ್ಯ ವೈಫಲ್ಯ ಗಮಿನಿಸಿ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದರು.
ಅಧಿಕಾರಿಗಳ ಭರವಸೆಗೆ ಒಪ್ಪಿದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯ ಅಧಿಕಾರಗಳಾದ ವಿನೋದ ಅಂಗಡಿ, ಅಭಿಷೇಕ ನಾಯ್ಕ, ಸಂಗಮೇಶ ಪಾಟೀಲ, ಕಚೇರಿಯ ಅಧೀಕ್ಷಕ ವಿ.ಕೆ. ಗೋಕರ್ಣಕರ್ ಉಪಸ್ಥಿತರಿದ್ದರು.
ಸಿಐಟಿಯು ಮುಖಂಡ ಟಿ.ಎಸ್. ನಾಯ್ಕ, ಪದಾಧಿಕಾರಿಗಳಾದ ಸಂದೇಶ ತೇಲಿ, ವೀರೇಶ ಗಡ್ಡದೇವರಮಠ, ಸದಾನಂದ ಡಿಗ್ಗಿಕರ್, ಪಾರ್ವತಿ ಸರನಾಯಕ, ಪದ್ಮಾ ಹರಿಜನ ಹಾಗೂ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಕ್ರಮಖಾನ್, ವಹಾಬ ಬಾಸೂರಿ ಇತರರು ಪಾಲ್ಗೊಂಡಿದ್ದರು.