

ಬಾಗೇಪಲ್ಲಿ : ವೇತನ ಕಡಿತಗೊಳಿಸಿರುವುದನ್ನು ಖಂಡಿಸಿ ಟೋಲ್‌ಗೇಟ್ ನೌಕರರು ಕರ್ತವ್ಯ ಬಹಿಸ್ಕರಿಸಿ ಟೋಲ್‌ಗೇಟ್ ನಿರ್ವಹಣೆ ವ್ಯವಸ್ಥಾಪಕರ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಟೋಲ್‌ಗೇಟ್ ನೌಕರರ ಸಂಘದ ಅಧ್ಯಕ್ಷ ಜಿ.ಬಿ.ಶಿವಶಂಕರರೆಡ್ಡಿ ಮಾತನಾಡಿ, ಪಟ್ಟಣದ ಹೊರವಲಯದ ನಾರೇಪಲ್ಲಿ ಟೋಲ್‌ಗೇಟ್ ನೌಕರರ ಏಪ್ರಿಲ್ ವೇತನವನ್ನು ಸಂಸ್ಥೆಯವರು ಕಡಿತಗೊಳಿಸಿದ್ದಾರೆ. ಕರೊನಾ ಸಮಯದಲ್ಲಿಯೂ ಸಂಚಾರಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶಕ್ಕಾಗಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಕೋವಿಡ್ 19 ಕಾರಣ ಸಂಸ್ಥೆಗೆ ನಷ್ಠ ಸಂಭವಿಸಿದೆ ಎಂದು ಹೇಳಿ ನೌಕರರ ವೇತನದಲ್ಲಿ ಕಡಿತ ಮಾಡಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಖಾಸಗಿ ಮಾಲೀಕತ್ವದ ಕಂಪನಿ ಮಾಲೀಕರು ನೌಕರರ ವೇತನ ಕಡಿತಗೊಳಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶಿಸಿದೆ, ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಟೋಲ್‌ಗೇಟ್ ನೌಕರರ ವೇತನ ಕಡಿತಗೊಳಿದ್ದಾರೆ. ವೇತನ ಕಡಿತದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದರು.
ಸಿಐಟಿಯು ತಾಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿಂಗ್, ಸಹ ಕಾರ್ಯದರ್ಶಿ ನಾಗರಾಜು, ಖಜಾಂಚಿ ಶಿವಪ್ಪ, ಸದಸ್ಯರಾದ ಎನ್.ಶ್ರೀನಿವಾಸ್, ಎ.ವಿ.ಶಿವಪ್ಪ, ಆರ್.ಮಂಜುನಾಥ, ಎನ್.ವೆಂಕಟೇಶ್ ಮತ್ತಿತರರು ಇದ್ದರು.