

ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ. ಕೇಂದ್ರ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಚಿಕ್ಕ ಮಕ್ಕಳಲ್ಲಿನ ಉಸಿರಾಟದ ಸಮಸ್ಯೆಗಳ ಕುರಿತು ನೇರ ಫೋನ್ ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಜ್ಯೋತಿ ಹಟ್ಟಿಹೋಳಿ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಉಸಿರಾಟದ ತೊಂದರೆಗಳ ಕುರಿತು ಜಾಗೃತಿ ಮೂಡಿಸಿದರು.
ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿದ ಅವರು, ಮಗುವಿಗೆ ಉಸಿರಾಟದ ತೊಂದರೆ, ವಿಪರಿತ ಕೆಮ್ಮು, ಗಂಟಲಿನಿಂದ ಶಬ್ಧ ಬರುವ ಲಕ್ಷಣವಿದ್ದಲ್ಲಿ, ಅದು ಅಸ್ತಮಾ ಸಮಸ್ಯೆ ಉಹಿಸಬಹುದು. ಇದು ಒಂದು ಬಗೆಯ ಶ್ವಾಸಕೋಶದ ಸೊಂಕು. ಅನುವಂಶಿಯವಾಗಿರುತ್ತದೆ. ಮಕ್ಕಳ ಉಸಿರಾಟದ ವ್ಯವಸ್ಥೆ ಮೇಲೆ ಪ್ರಭಾವ ಬೀರಿ ಉಸಿರಾಡಲು ಕಷ್ಟವಾಗುವಂತೆ ಮಾಡುತ್ತದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆ ಪ್ರತಿಯೊಬ್ಬ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಾಗಿ ಉಸಿರಾಟದ ಸಮಸ್ಯೆ ಹೊಂದಿರುವ ರೋಗಿಗಳು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳಲ್ಲಿ ಶೀತ ಕಾಣಿಸಿಕೊಂಡ ಬಳಿಕ ಸಾಮಾನ್ಯವೆಂದು ಸಾಕಷ್ಟು ಪೋಷಕರು ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಈ ಶೀತ ಬಾಧೆ ಮುಂಬರುವ ದಿನಗಳಲ್ಲಿ ಉಸಿರಾಟದ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಮಕ್ಕಳಲ್ಲಿಯ ಉಸಿರಾಟದ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಪೋಷಕರು ಮಕ್ಕಳಲ್ಲಿ ಕಾಣಿಸಿಕೊಳ್ಳುವ ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಗಳ ಬಗ್ಗೆ ಅರಿತು ನಿರ್ವಹಿಸುವ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ತಿಳಿದುಕೊಳ್ಳುವುದು ಮುಖ್ಯ ಮಾಹಿತಿ ನೀಡಿದರು.
ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಿರ್ವಹಿಸಿದರು.