

ಕೆಜಿಎಫ್: ತಾಲೂಕಿನ ಪಾರಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಅಲ್ಲಿಕುಂಟೆ ಕದಿರನೇಹಳ್ಳಿಯಲ್ಲಿರುವ 200 ವರ್ಷಗಳ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯದ 4 ವಿಗ್ರಹಗಳಿಗೆ ಕಿಡಿಗೇಡಿಗಳು ಗುರುವಾರ ರಾತ್ರಿ ಹಾನಿ ಮಾಡಿದ್ದಾರೆ.
ದೇವಾಲಯದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದ್ದ 4 ಮೂರ್ತಿ ಕೆಡವಿದ್ದಲ್ಲದೆ ಮುಂಭಾಗದ ಧ್ವಜಸ್ಥಂಭ, ಗೋಡೆಗಳಿಗೂ ಹಾನಿ ಮಾಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಧರಣಿದೇವಿ, ಕಳೆದ 50 ವರ್ಷಗಳಲ್ಲಿ ಇಂತಹ ಘಟನೆ ನಡೆದಿಲ್ಲ.
ಆರೋಪಿಗಳ ಪತ್ತೆಗೆ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ 4 ವಿಶೇಷ ಪರಿಣಿತರ ತಂಡ ರಚಿಸಲಾಗಿದ್ದು, ಶ್ರೀವಾಗಿ ಆರೋಪಿಗಳನ್ನು ಬಂಧಿಸಲಾಗುವುದು. ಅಲ್ಲಿಯವರೆಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಸ್ಥಳಕ್ಕೆ ಫೋರೆನ್ಸಿಕ್ ಸಿಬ್ಬಂದಿ ಆಗಮಿಸಿ ಬೆರಳಚ್ಚು ಸಂಗ್ರಹಿಸಿದರು.
ಯುವಜನರಲ್ಲಿ ಅರಿವು ಮೂಡಿಸಬೇಕಿದೆ: ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಪಂಗಿ ಮಾತನಾಡಿ, ಭಾರತವು ಹಿಂದು ರಾಷ್ಟ್ರವಾಗಿದ್ದು, ಸರ್ವ ಧರ್ಮದವರು ಅನ್ಯೂನ್ಯತೆಯಿಂದ ಬದುಕುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳಿಂದ ಈ ರೀತಿಯ ಕೃತ್ಯ ಸಂಭವಿಸುತ್ತಿದ್ದು, ಯುವಜನರಲ್ಲಿ ಅರಿವು ಮೂಡಿಸಬೇಕಿದೆ. ಇಂತ ಘಟನೆಯಿಂದ ಹಿಂದು ಸಮುದಾಯಕ್ಕೆ ಧಕ್ಕೆ ತರುವಂತಾಗಿದೆ. ಪಿಡಿಒ ಶ್ರೀರಾಮರೆಡ್ಡಿ ಅವರಿಗೆ ವೈಯುಕ್ತಿಕ ಹಣ ನೀಡುವುದರೊಂದಿಗೆ ಜೀಣೋದ್ಧಾರಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೇವಸ್ಥಾನ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದರು. ತಕ್ಷಣ ದೇವಾಲಯಕ್ಕೆ ಸಂಭಂದಪಟ್ಟ ಸರ್ವೇ ನಡೆಸಿ ಚೆಕ್ಕು ಬಂದಿ ಹಾಕಿ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು. ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಒತ್ತುವರಿ ತೆರವುಗೊಳಿಸಿ ಎಂದು ತಹಸೀಲ್ದಾರ್ ಸುಜಾತಾ ಅವರಿಗೆ ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಜಯಪ್ರಕಾಶ್ ನಾಯ್ಡು, ನಗರ ಬಿಜೆಪಿ ಅಧ್ಯಕ್ಷ ಕಮಲ್ನಾಥ್, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀಧರ್ ರಾವ್ ಶಿಂಧೆ, ಗಣೇಶನ್, ಬಜರಂಗದಳ ತಾಲೂಕು ಅಧ್ಯಕ್ಷ ತುಳಸಿರಾಮ್ ಇತರರಿದ್ದರು.