

ಅರಕಲಗೂಡು : ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಐತಿಹಾಸಿಕ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ಬ್ರಹ್ಮೋತ್ಸವ ಭಾನುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.
ರಥೋತ್ಸವದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕ, ಬೆಳಗ್ಗೆ ಧ್ವಜಾರೋಹಣ, ರಾತ್ರಿ ಹಂಸವಾಹನೋತ್ಸವ, ಶೇಷವಾಹನೋತ್ಸವ, ಗಜೇಂದ್ರ ಮೋಕ್ಷ, ಸಂಜನಗರುಡೋತ್ಸವ, ಕಲ್ಯಾಣೋತ್ಸವ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು.
ಭಾನುವಾರ ಬೆಳಗ್ಗೆ ಸೂರ್ಯ ಮಂಡಲೋತ್ಸವ, ಕೃಷ್ಣಗಂಧೋತ್ಸವ ಸೇವೆ ಸಲ್ಲಿಸಲಾಯಿತು. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊರತಂದು ಅಲಂಕೃತ ಅಡ್ಡೆಮೇಲೆ ಹೊತ್ತು ಭಕ್ತರು ಉತ್ಸವ ನಡೆಸಿ ಪ್ರದಕ್ಷಿಣೆ ಹಾಕಿದರು. ಬಳಿಕ ದೇವಸ್ಥಾನ ಮುಂಭಾಗ ಸಿಂಗರಿಸಿದ್ದ ರಥದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ನೆರೆದಿದ್ದ ಭಕ್ತರ ಗೋವಿಂದನ ನಾಮಸ್ಮರಣೆ ಮಾಡುತ್ತಾ ಜಯಘೋಷಗಳ ನಡುವೆ ತೇರು ಎಳೆಯಲು ಆರಂಭಿಸಿದರು.
ತೇರು ಮುಂದೆ ಸಾಗುವಾಗ ಭಕ್ತರು ರಥದ ಮೇಲೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು. ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ರಥೋತ್ಸವದ ಪ್ರಯುಕ್ತ ವಿಶೇಷ ನಾದಸ್ವರ ವಾದನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾಗವತ ಪ್ರವಚನ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇವಾಲಯಕ್ಕೆ ರಾಜಗೋಪುರ ನಿರ್ಮಿಸಿಕೊಟ್ಟ ವೆಂಕಟವರದಾಚಾರ್ ಕುಟುಂಬದವರಿಗೆ ಹಾಗೂ ಗೋಪಾಲಕೃಷ್ಣ ಸ್ವಾಮಿ ಸ್ವರ್ಣಲೇಪಿತ ತಂಜಾವೂರು ಶೈಲಿಯ ಚಿತ್ರಪಟ ಅನಾವರಣಗೊಳಿಸಿ ಕಲಾವಿದೆ ಜಯಶ್ರೀ ಫಣೀಶ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.