ವೆಚ್ಚ ತಗ್ಗಿಸಿ ಆದಾಯ ಹೆಚ್ಚಿಸಿ : ಮೈಸೂರು ನಗರ ಪಾಲಿಕೆ ಬಜೆಟ್‌ಗೆ ನಾಗರಿಕರ ಸಲಹೆ

mcc
Published on

ಮೈಸೂರು: ನಗರ ಪಾಲಿಕೆಯು ಕಂದಾಯ ವಸೂಲಾತಿಗೆ ಹೆಚ್ಚಿನ ಒತ್ತು ನೀಡಬೇಕು, ರಸ್ತೆಗಳು ದೀರ್ಘಕಾಲ ಬಾಳಿಕೆ ಬರಲು ಪ್ಲಾಸ್ಟಿಕ್ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕು, ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕು, ಪಾಲಿಕೆಗೆ ಹೊರೆಯಾಗಿರುವ 9 ವಲಯ ಕಚೇರಿಗಳನ್ನು ರದ್ದುಪಡಿಸಬೇಕು, ಸಂಚಾರ ದಟ್ಟಣೆಗೆ ಕಾರಣವಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರಿಸಬೇಕು…

ಇವು ನಗರ ಪಾಲಿಕೆ ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಬಜೆಟ್ ಕುರಿತು ಜನಾಭಿಪ್ರಾ ಯ ಸಂಗ್ರಹಿಸಲು ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಕೇಳಿಬಂದ ಪ್ರಮುಖ ಸಲಹೆಗಳು. ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ, ನಗರದ ಬೆಳವಣಿಗೆಗೆ ಪೂರಕವಾಗಿ ರಿಂಗ್‌ರೋಡ್ ಹೊರ ಭಾಗದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಪಾಲಿಕೆಗೆ ಜಾಗವನ್ನು ಮುಡಾ ನೀಡಬೇಕು, ಮುಡಾ ಸಿಎ ನಿವೇಶನ ಹಂಚಿಕೆ ಸಂದರ್ಭ ನಗರ ಪಾಲಿಕೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಬಾಲ್ಯ ಫೌಂಡೇಷನ್ ಮುಖ್ಯಸ್ಥ ಅನಿಲ್ ಸದಾನಂದ ಮಾತನಾಡಿ, ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳು ಬಹುಬೇಗನೆ ಹಾಳಾಗುತ್ತಿದ್ದು, ಜನರಿಂದ ಸರ್ಕಾರ ಸಂಗ್ರಹಿಸುವ ತೆರಿಗೆ ಹಣ ಪೋಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಿದರೆ ದೀರ್ಘಕಾಲ ಬಾಳಿಕೆ ಬರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿ ಎಂದರು.

ನಗರ ಪಾಲಿಕೆಯ ಬಜೆಟ್‌ನಲ್ಲಿ ಕಾಯಕ ಸಮಾಜವನ್ನು ಕಡೆಗಣಿಸಲಾಗುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕಾಯಕ ಸಮಾಜಗಳಿಗೆ ವಿಶೇಷ ಅನುದಾನ ಕಾಯ್ದಿರಿಸಬೇಕು ಎಂದು ಸವಿತಾ ಸಮಾಜದ ಅಧ್ಯಕ್ಷ ನಾಗೇಶ್ ಮನವಿ ಮಾಡಿದರು.

ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಮೈಸೂರು ಕುಸ್ತಿಗೆ ಹೆಸರುವಾಸಿಯಾಗಿದ್ದು, ನಗರ ಪಾಲಿಕೆಯಿಂದ ಪ್ರತಿ ವರ್ಷ ಕುಸ್ತಿ ಪಂದ್ಯಾವಳಿ ಆಯೋಜಿಸಬೇಕು. ಮೈಸೂರು ಸ್ವಚ್ಛತೆಯಲ್ಲಿ ನಂ.1 ಸ್ಥಾನಕ್ಕೆ ಮರಳಲು ಈಗಿನಿಂದಲೇ ತಯಾರಿ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಉಪ ಮೇಯರ್ ಡಾ.ಜಿ. ರೂಪಾ, ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ಮಾಜಿ ಮೇಯರ್‌ಗಳಾದ ಎಚ್.ಎಂ. ಶಾಂತಕುಮಾರಿ, ಸುನಂದಾ ಪಾಲನೇತ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net