

ಗದಗ: ಪಿಎಂ ಕೇರ್ಸ್ ನಿಧಿಯಿಂದ ಒದಗಿಸಲಾಗಿರುವ ವೆಂಟಿಲೇಟರ್ಗಳು ಕಳಪೆ ಗುಣಮಟ್ಟದ್ದಾಗಿವೆ. ಕೆಲವು ಪ್ರಮುಖ ಪರಿಕರಗಳಿಲ್ಲದೆ ವೆಂಟಿಲೇಟರ್ಗಳನ್ನು ಪೂರೈಕೆ ಮಾಡಿದ್ದರಿಂದ ಅವು ನಿಷ್ಪ್ರಯೋಜಕವಾಗಿವೆ. ಕೆಲಸಕ್ಕೆ ಬಾರದ ಡಬ್ಬಿಗಳಂತಾಗಿವೆ ಎಂದು ಶಾಸಕ ಎಚ್.ಕೆ.ಪಾಟೀಲ ಕಿಡಿಕಾರಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೆಂಟಲೇಟರ್ಗೆ ಸಂಬಂಧಿಸಿದಂತೆ ಮೇಲ್ಮಟ್ಟದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ಮೂಡಿದೆ’ ಎಂದರು.
ದೇಶದಲ್ಲಿ ಕರೊನಾ ಲಸಿಕೆ ಕೊರತೆಯಾಗಲು ಕೇಂದ್ರ ಸರ್ಕಾರದ ಧೋರಣೆಯೇ ನೇರ ಕಾರಣ. ಕೇವಲ ಎರಡು ಕಂಪನಿಯಿಂದ ದೇಶಕ್ಕೆ ಬೇಕಾಗುವಷ್ಟು ವ್ಯಾಕ್ಸಿನ್ (ಲಸಿಕೆ) ಉತ್ಪಾದಿಸಲು ಸಾಧ್ಯವೇ ಇಲ್ಲ. ವ್ಯಾಕ್ಸಿನ್ ಉತ್ಪಾದನೆಗೆ ಮುಂದೆ ಬರುವ ಇತರೆ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಿ, ಎರಡೇ ಕಂಪನಿಗಳ ಸ್ವತ್ತಾಗಿರುವ ವ್ಯಾಕ್ಸಿನ್ ಉತ್ಪಾದನೆಯ ಏಕಸ್ವಾಮ್ಯ ತಪ್ಪಿಸಬೇಕು. ದೇಶದಲ್ಲಿ 8 ಸರ್ಕಾರಿ ಔಷಧ ಉತ್ಪಾದನಾ ಕಂಪನಿಗಳಿವೆ. ಅಲ್ಲಿ ಸಹ ಲಸಿಕೆ ಉತ್ಪಾದನೆಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಕಳಪೆ ಗುಣಮಟ್ಟದ ವೆಂಟಿಲೇಟರ್ಗಳ ಪೂರೈಕೆ ಕುರಿತು ಮತ್ತು ವ್ಯಾಕ್ಸಿನ್ ಉತ್ಪಾದನೆಯನ್ನು ಎರಡೇ ಕಂಪನಿಗಳ ಏಕಸ್ವಾಮ್ಯತೆಗೆ ಅವಕಾಶ ಕಲ್ಪಿಸಿರುವ ಬಗ್ಗೆ ಸವೋಚ್ಚ ನ್ಯಾಯಾಲಯ ವಿಚಾರಣೆ ನಡೆಸಬೇಕು. ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಜನರು ಜೀವ ಕಳೆದುಕೊಳ್ಳುವಂತಹ ದಾರುಣ ಸ್ಥಿತಿ ಉಂಟಾಗಿದೆ. ಸೋಂಕು ಪತ್ತೆ ಹಚ್ಚುವ ಕಾರ್ಯ, ಸೋಂಕಿತರ ತಪಾಸಣೆ, ಚಿಕಿತ್ಸೆ ನೀಡುವಲ್ಲಿ ಸರ್ಕಾರ ಎಡವಿದ್ದು, ಇದರ ಪರಿಣಾಮವಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದರು.
ಏಪ್ರಿಲ್ ತಿಂಗಳ 17ರಿಂದ ಮೇ 14ರ ವರೆಗೆ ಕರೊನಾ ಸೋಂಕು ಟೆಸ್ಟಿಂಗ್ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವುದರ ಮೂಲಕ ಸರ್ಕಾರ ಕಳ್ಳಾಟ ಆಡಿದೆ. ಏ. 17ಕ್ಕಿಂತ ಮೊದಲು ರಾಜ್ಯದಲ್ಲಿ ಗರಿಷ್ಠ 2,98,000 ಪ್ರತಿದಿನ ಟೆಸ್ಟ್ಗಳಾಗಿದ್ದರೆ, ತದ ನಂತರ ಅಂದರೆ ಮೇ 14ರ ಹೊತ್ತಿಗೆ 1,16,000 ಕ್ಕೆ ಇಳಿದಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಟೆಸ್ಟಿಂಗ್ ಪ್ರಮಾಣದಲ್ಲಿ ಮಾತ್ರ ಕಡಿಮೆಯಾಗಿದೆ. ದುರುದ್ದೇಶಪೂರ್ವಕವಾಗಿ ಟೆಸ್ಟಿಂಗ್ ಪ್ರಮಾಣ ಕಡಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಟೆಸ್ಟಿಂಗ್ ಪ್ರಮಾಣ ಇಳಿಕೆ ಹಾಗೂ ಸೋಂಕಿತರ ಪತ್ತೆ ಹಚ್ಚುವಿಕೆಯಲ್ಲಿ ವಿಳಂಬ, ರಾಜ್ಯದಲ್ಲಿ ಇದ್ದ ತಪಾಸಣೆ ಕೇಂದ್ರಗಳ (ಟೆಸ್ಟಿಂಗ್ ಲ್ಯಾಬ್) ಸಂಖ್ಯೆಯನ್ನು ಕಡಿತಗೊಳಿಸುವಿಕೆ, ಖಾಸಗಿ ಮತ್ತು ಸರ್ಕಾರಿ ಲ್ಯಾಬ್ಗಳಲ್ಲಿ ಮಾಡಿದ ಟೆಸ್ಟ್ಗಳ ಫಲಿತಾಂಶ ವಿಳಂಬ ಇತ್ಯಾದಿ ಮಾಹಿತಿಗಳ ಬಗ್ಗೆ ನೈಜ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಅವರಿಂದ ಟೆಸ್ಟಿಂಗ್ ಪ್ರಮಾಣದ ಇಳಿಕೆ, ಅದರ ಹಿಂದಿನ ದುರುದ್ದೇಶ ಇತ್ಯಾದಿ ಅಂಶಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ವಿಳಂಬವಿಲ್ಲದೇ ಕ್ರಮ ಕೈಗೊಳ್ಳಬೇಕು. | ಎಚ್.ಕೆ.ಪಾಟೀಲ ಶಾಸಕ, ಗದಗ