

ಬಾಗಲಕೋಟೆ: ಲೋಕಾಪುರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ನಡುವೇ ವೆಂಕಟೇಶ್ವರ ರಥೋತ್ಸವ ಸಂಭ್ರಮದಿ0ದ ಜರುಗಿತು. ನವರಾತ್ರಿ ಉತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಾವಿನ ತೋರಣ, ತುಳಸಿಮಾಲೆ, ಹೂಮಾಲೆ, ಕಬ್ಬು, ಬಾಳೆ ಗಿಡ, ಕೆಸರಿ ಬಣ್ಣದ ಧ್ವಜಗಳಿಂದ ರಥ ಅಲಂಕಾರ ಮಾಡಲಾಗಿತ್ತು. ಘಂಟನಾದ ವೇದಘೋಷಗಳೊಂದಿಗೆ ಜರುಗಿದ ರಥೋತ್ಸವಕ್ಕೆ ನೆರೆದವರು ಸಾಕ್ಷಿಯಾದರು. ರಥದ ಮೇಲೆ ಕಳಸ ಇಡಲಾಗಿತ್ತು. ವೆಂಕಟರಮಣ ಗೋವಿಂದ ಗೋವಿಂದ ಎಂಬ ಜಯಘೋಷ ಹಾಕುತ್ತಾ ರಥ ಮುಂದೆ ಸಾಗಿತು.
ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಹೂವು ಅರ್ಪಣೆ ಮಾಡಿ, ತೆಂಗಿನಕಾಯಿ ಒಡೆದು, ಕರ್ಪೂರ ಹಚ್ಚಿ, ಊದುಬತ್ತಿ ಬೆಳಗಿ ರಥಕ್ಕೆ ನಮಸ್ಕರಿಸಿದರು, ನಂತರ ವೆಂಕಟೇಶ್ವರನ ದರ್ಶನ ಪಡೆದರು. ರಥೋತ್ಸವದ ವೇಳೆ ರಥೋತ್ಸವ ಸಾಗುವ ವೇಳೆಗೆ ಭಕ್ತರು ಹೂವನ್ನು ಸಿಂಪಿಡಿಸಿದರು, ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಸಾಯಂಕಾಲ ಬನ್ನಿ ಮುಡಿಯುವ ಕಾರ್ಯಕ್ರಯಮ ಮತ್ತು ಪುರಾಣ ಮಂಗಲ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜರುಗಿತು.
ಜ್ಞಾನೇಶ್ವರ ಮಠದ ಪೀಠಾದಿಕಾರಿ ಬ್ರಹ್ಮಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ದೇವಸ್ಥಾನದ ಅರ್ಚಕ ಬಿ.ಎಲ್. ಬಬಲಾದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಥೋತ್ಸವ ವೇಳೆ ಬಿ.ಡಿ.ಚಿನಗುಂಡಿ, ಗುರುರಾಜ ಜೋಶಿ, ಶಿವಾನಂದ ಉದಪುಡಿ, ಲೋಕಣ್ಣ ಕತ್ತಿ, ಗುರುರಾಜ ಉದಪುಡಿ, ವಿನೋದ ಘೋರ್ಪಡೆ, ಕಿರಣ ದೇಸಾಯಿ, ವಿಜಯಕಾಂತ ದೇಸಾಯಿ ಇದ್ದರು.