

ಚಿತ್ರದುರ್ಗ: ತುರುವನೂರು ರಸ್ತೆಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇಗುಲದ ಆವರಣದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು. ಈ ವೇಳೆ ಹರ್ಷೋದ್ಗಾರ ಮುಗಿಲುಮುಟ್ಟಿತು.
ಮುಂಜಾನೆ ಸುಪ್ರಭಾತ, ಪುಷ್ಪಾರ್ಚನೆ, ಮಹಾಮಂಗಳಾರತಿ ಸೇರಿ ವಿಶೇಷ ಪೂಜೆಗಳು ನೆರವೇರಿದವು. ಬೆಳಗ್ಗೆ ಧ್ವಜ ಅವರೋಹಣ, ಓಕಳಿ, ಉಯ್ಯಲೆ ಉತ್ಸವ, ನಂತರ ಅಂಬು ಕತ್ತರಿಸಿ ಅಂಬಿನೋತ್ಸವಕ್ಕೂ ಚಾಲನೆ ನೀಡಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ವಿಜಯದಶಮಿಯಂದು ಶಾಸ್ತ್ರ, ಸಂಪ್ರದಾಯದಂತೆ ಲಕ್ಷ್ಮೀ, ಪದ್ಮಾವತಿ ದೇವಿ ಸಮೇತ ಗರುಡ ವಾಹನದ ಮೇಲೆ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಯನ್ನು ವೈಭವೋಪೇತವಾಗಿ ಪುಷ್ಪಗಳಿಂದ ಅಲಂಕರಿಸಿ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರು ತೇರು ಎಳೆದು ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೆದ್ದರು.
ಗರುಡ ಪ್ರಾಕಾರ ನಡೆದ ವೇಳೆ ಸ್ವಾಮಿಯ ಮೂರ್ತಿ ದೇಗುಲದೊಳಗಿನಿಂದ ಹೊರಗೆ ಬರುತ್ತಿದ್ದಂತೆ ಭಕ್ತರು ಕಣ್ತುಂಬಿಕೊಂಡರು. ನಗರ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ದೇಗುಲದ ಆವರಣದಲ್ಲಿ ನೆರೆದಿದ್ದ ಭಕ್ತರು ಬನ್ನಿ ಮುಡಿಯುವ ಮೂಲಕ ಪರಸ್ಪರ ಹಬ್ಬದ ಸಂಭ್ರಮ ವಿನಿಮಯ ಮಾಡಿಕೊಂಡರು.