ವೃದ್ಧೆಯ ಮಾಂಗಲ್ಯ ಸರ ಕಿತ್ತು ಪರಾರಿ

Published on

ಚನ್ನರಾಯಪಟ್ಟಣ : ಬೆಂಗಳೂರಿಗೆ ಹೋಗುವುದಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆಯ ಕೊರಳಲ್ಲಿದ್ದ 2.50 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳನೊಬ್ಬ ದೋಚಿ ಪರಾರಿಯಾಗಿದ್ದಾನೆ.
ಪಟ್ಟಣದ ಮೈಸೂರು ರಸ್ತೆ ನಿವಾಸಿ ಪುಷ್ಪಾ (63) ಸರ ಕಳೆದುಕೊಂಡವರು. ಬೆಂಗಳೂರಿನಲ್ಲಿರುವ ಪುತ್ರನನ್ನು ನೋಡಿಕೊಂಡು ಬರಲು ಪತಿ ಪುಂಡಲೀಕ ಜೊತೆಗೆ ಪುಷ್ಪಾ ಅವರು ಶನಿವಾರ ತೆರಳುತ್ತಿದ್ದರು. ಪತಿ ಪುಂಡಲೀಕ ರೈಲ್ವೆ ಟಿಕೆಟ್ ತರಲೆಂದು ಕೌಂಟರ್ ಕಡೆಗೆ ತೆರಳಿದ್ದಾಗ ಪುಷ್ಪಾ ಬಳಿಗೆ ಬಂದ ಅಪರಿಚಿತ ಈ ದಿನ ರೈಲು ಇಲ್ಲ, ಬಸ್ಸಿಗೆ ಹೋಗಿ ಎಂದು ಹೇಳಿದ್ದಾನೆ. ಆಗ ಪುಷ್ಪಾ ಅವರು ಪತಿ ಪುಂಡಲೀಕ ಅವರು ಬರುವುದನ್ನು ಕಾಯುತ್ತಾ ಕುಳಿತಿದ್ದಾಗ ಕೊರಳಲ್ಲಿದ್ದ 75 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರದಿಂದ ಅರಕಲಗೂಡಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಕಳವು ಮಾಡಿರುವ ಪ್ರಕರಣದ ಫೆ. 16ರಂದು ನಡೆದಿದೆ.
ಅರಕಲಗೂಡು ಪಟ್ಟಣದ ವಿನಾಯಕ ನಗರ ನಿವಾಸಿ ರುಕ್ಮಿಣಿ ಅವರು ಗೃಹಪ್ರವೇಶ ಸಮಾರಂಭಕ್ಕಾಗಿ ಹೊಳೆನರಸೀಪುರಕ್ಕೆ ಬಂದಿದ್ದರು. ಮಧ್ಯಾಹ್ನ 12 ಗಂಟೆಗೆ ಅರಕಲಗೂಡಿಗೆ ವಾಪಸಾಗುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 2 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ಪ್ಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net